ರಾಜ್ಯದ ವಿವಿಧೆಡೆ ತೆರಿಗೆ ಅಧಿಕಾರಿಗಳ ದಾಳಿ, ಅಪಾರ ಪ್ರಮಾಣದ ಬಟ್ಟೆ, ನಗದು ವಶ
ಬೆಳಗಾವಿ: ಬೆಳಗಾವಿಯ ಪೀರನವಾಡಿಯ ಗೋದಾಮಿನ ಮೇಲೆ ಸರಕು ಮತ್ತು ಸೇವಾ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು ಲಕ್ಷಾಂತರ ರೂಪಾಯಿ ಮೌಲ್ಯದ ಬಟ್ಟೆಗಳನ್ನು ವಶಪಡಿಸಿಕೊಂಡಿದೆ.
"ನಗರದಲ್ಲಿ ಇತ್ತೀಚೆಗೆ ಭಾರೀ ಪ್ರಮಾಣದ ಕುಕ್ಕರ್‌ಗಳು ಹಾಗು ಇಸ್ತ್ರಿಪೆಟ್ಟಿಗೆಳನ್ನು ಅಕ್ರಮವಾಗಿ ದಾಸ್ತಾನು ಮಾಡಿರುವುದು ಪತ್ತೆಯಾಗಿದ್ದು ಇದಕ್ಕೆ ಸಂಬಂಧಿಸಿ 26 ಗೋದಾಮುಗಳನ್ನು ಪರಿಶೀಲಿಸಲಾಗಿತ್ತು. ಅವುಗಳಲ್ಲಿ ಜೈ ಅಂಬೆ ಕ್ಲಾಥ್ ಸ್ಟೋರ್ಸ್ ಎನ್ನುವ ಗೋದಾಮಿನಲ್ಲಿ ಬೃಹತ್ ಪ್ರಮಾಣದಲ್ಲಿ ಸೀರೆ, ಬಟ್ಟೆ ಹಾಗೂ ಸಿದ್ಧ ಉಡುಪುಗಳು ಪತ್ತೆಯಾಗಿದೆ.ಸರಕು ಹಾಗೂ ಸೇವಾ ತೆರಿಗೆ (ಜಾರಿ) ಇಲಾಖೆ ಬೆಳಗಾವಿ ವಿಭಾಗದ ಜಂಟಿ ಆಯುಕ್ತ ರವಿ ಜೆ. ಸ್ಯಾಂಕ್ಟಸ್ ಹೇಳಿದ್ದಾರೆ.
ವಶಕ್ಕೆ ಪಡೆದ ಬಟ್ಟೆಗಳ ಮೌಲ್ಯವಿನ್ನೂ ತಿಳಿದುಬಂದಿಲ್ಲ. ತನಿಖೆ ಮುಂದುವರಿದಿದೆ. ಚುನಾವಣೆ ಸಂದರ್ಭ ಮತದಾರರ ಓಲೈಕೆಗಾಗಿ ಬಟ್ಟೆ ವಿತರಣೆಗೆ ರೀತಿ ಅನಧಿಕೃತವಾಗಿ ದಾಸ್ತಾನು ಮಾಡಿರುವ ಸಾಧ್ಯತೆ ಇದೆ.ಎಂದು ಅವರು ಹೇಳಿದ್ದಾರೆ.
ಬಟ್ಟೆ ಸಂಗ್ರಹದ ಕುರಿತ ನಿಖರ ಲೆಕ್ಕ ಸಿಕ್ಕಿದ ಬಳಿಕ ನಿಯಮಾನುಸಾರವಾಗಿ ದಂಡ ವಿಧಿಸಿ ಕ್ರಮ ಜರುಗಿಸುತ್ತೇವೆ ಎಂದು ಅವರು ಹೇಳಿದ್ದಾರೆ.
ಬೀದರ್ ನಲ್ಲಿ 1.86 ಕೋಟಿ ನಗದು ವಶ
ದಾಖಲೆಗಳಿಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ 1.86 ಕೋಟಿ ರೂ. ಗಳನ್ನು ಬೀದರ್ ತಾಲೂಕು ಭಂಗೂರು ಚೆಕ್ ಪೋಸ್ಟ್ ನಲ್ಲಿ ತೆರಿಗೆ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ತೆಲಂಗಾಣದಿಂದ ಬೀದರ್ ಅಥವಾ ಕಲಬುರ್ಗಿಗೆ ಹಣ ಒಯ್ಯಲಾಗುತ್ತಿತ್ತು ಎಂದು ಅಧಿಕಾರಿಗಳು ಊಹಿಸಿದ್ದು ನೀತಿ ಸಂಹಿತೆ ಹಿನ್ನೆಲೆಯಲ್ಲಿ ಕಾರು ತಪಾಸಣೆ ನಡೆಸಿದಾಗ ಅಪಾರ ಪ್ರಮಾಣದ ನಗದು ಪತ್ತೆಯಾಗಿದೆ.
ಹಣ ಯಾರದ್ದು? ಎಲ್ಲಿಗೆ ಸಾಗಿಸಲಾಗುತ್ತಿತ್ತು? ಈ ಕುರಿತ ಮಾಹಿತಿ ಕಲೆ ಹಾಕಲಾಗುವುದು ಎಂದು ಬೀದರ್ ಜಿಲ್ಲಾಧಿಕಾರಿ ಡಾ. ಎಚ್. ಆರ್. ಮಹದೇವ್ ಹೇಲಿದ್ದಾರೆ.
ಪ್ರಕರಣ ಸಂಬಂಧ ಕಾರಿನ ಚಾಲಕ ಸೇರಿ ಮೂವರನ್ನು ಬಂಧಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.