ಬೆಂಗಳೂರು: ಬೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುದಾಘಾತದಿಂದ ಗಾಯಗೊಂಡಿದ್ದ ವ್ಯಕ್ತಿಗಳಿಗೆ ಪರಿಹಾರ ನೀಡುವ ಆದೇಶವನ್ನು ಕೆಪಿಟಿಸಿಎಲ್ ಪ್ರಕಟಿಸಿದ ಮಾರನೇ ದಿನವೇ ಮತ್ತೊಂದು ಪ್ರಕರಣದಲ್ಲಿ 40 ಲಕ್ಷ ರೂ. ಪರಿಹಾರ ನೀಡಬೇಕಾಗಿದೆ.
ಮನೆ ಮೇಲೆ ಹಾದು ಹೋಗಿದ್ದ ಹೈ ಟೆನ್ಷನ್ ವೈರ್ ತಗುಲಿ ಗಾಯಗೊಂಡಿದ್ದ ಆರು ವರ್ಷದ ಬಾಲಕನಿಗೆ 40 ಲಕ್ಷ ರೂ. ಪರಿಹಾರ ನೀಡುವಂತೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಕೆಪಿಟಿಸಿಎಲ್ ಗೆ ಆದೇಶಿಸಿದೆ.
ಆಯೋಗ ದಾಖಲಿಸಿಕೊಂಡಿರುವ ದೂರಿನ ಪ್ರಕಾರ ಬನ್ನೇರುಘಟ್ಟ ರಸ್ತೆಯ ನಿವಾಸಿಯಾಗಿರುವ ಆರು ವರ್ಷದ ಬಾಲಕ ಮುಝ್ ಅಹ್ಮದ್ ಶರೀಪ್ ಗೆ ವಿದ್ಯುತ್ ವೈರ್ ತಗುಲಿ ಶೇ. 85 ರಷ್ಟು ದೇಹ ಸುಟ್ಟು ಹೋಗಿದ್ದು, ಸುಮಾರು 40 ದಿನಗಳ ಕಾಲ ತುರ್ತು ನಿಗಾ ಘಟಕದಲ್ಲಿ ಇರಿಸಲಾಗಿತ್ತು.
ಆ ಬಾಲಕ ಈಗ ಚೇತರಿಸಿಕೊಂಡಿದ್ದಾನೆ. ಆದರೂ ಶೌಚಾಲಯದ ಮೇಲೆ ಕೂರಲು ಸಾಧ್ಯವಾಗುತ್ತಿಲ್ಲ. ಆತನ ಕಾಲುಗಳನ್ನು ಸಡಿಲ ಮಾಡಲು ಆಗುತ್ತಿಲ್ಲ ಎಂದು ಆ ಬಾಲಕನ ಪೋಷಕರು ಆಯೋಗದಲ್ಲಿ ದೂರು ದಾಖಲಿಸಿದ್ದರು.
ಈ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ ನಂತರ 40 ಲಕ್ಷ ರೂ. ಪರಿಹಾರ ನೀಡುವಂತೆ ಕೆಪಿಟಿಸಿಎಲ್ ಗೆ ಆಯೋಗ ಆದೇಶಿಸಿದೆ.ಈ ಮುಂಚೆ 99 ಲಕ್ಷ ನೀಡುವಂತೆ ಚರ್ಚೆ ನಡೆಸಲಾಗಿತ್ತು. ಆದರೆ, ಆ ಬಾಲಕ ಈಗ ಚೇತರಿಸಿಕೊಂಡಿರುವುದರಿಂದ 40 ಲಕ್ಷ ಪರಿಹಾರ ನೀಡುವಂತೆ ಆದೇಶಿಸಲಾಗಿದೆ ಎಂದು ಆಯೋಗದ ಮೂಲಗಳಿಂದ ತಿಳಿದುಬಂದಿದೆ.
ಆದೇಶ ಹೊರಬಿದ್ದ ಒಂದು ವಾರದೊಳಗೆ ಆತನ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡುವಂತೆಯೂ ಆದೇಶಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.