ರಾಜ್ಯ

ಬೆಂಗಳೂರು: ಕುಖ್ಯಾತ ಸರಗಳ್ಳನ ಬಂಧನ, 10 ಲಕ್ಷ ಮೌಲ್ಯದ ಚಿನ್ನ ವಶ

Raghavendra Adiga
ಬೆಂಗಳೂರು: ವಿವಿಧೆಡೆಗಳಲ್ಲಿ ಸರಗಳವು ನಡೆಸಿದ್ದ ಕುಖ್ಯಾತ ಸರಗಳ್ಳನನ್ನು ಬೆಂಗಳೂರು ಜೆಪಿ ನಗರ ಪೋಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯಿಂದ  10.09 ಲಕ್ಷ ರೂ. ಮೌಲ್ಯದ ಚಿನ್ನದ ಸರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಯನ್ನು  ಸುಹೇಲ್ ಪಾಷಾ (23) ಎಂದು ಗುರುತಿಸಲಾಗಿದ್ದು ಈತ ರಾಮಮೂರ್ತಿನಗರದ ಎನ್‌.ಆರ್.ಐ ಲೇಔಟ್ ನಿವಾಸಿಯಾಗಿದ್ದ.
ನಗರದಲ್ಲಿ ಸರಗಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು ಇದರ ಮೂಲ ಹುಡುಕಲು ಪೋಲೀಸರು ವಿಶೇಷ ತಂಡಗಳನ್ನು ರಚಿಸಿದ್ದರು. ಈ ತಂಡವು ಸರಗಳ್ಳರ ಕುರಿತಂತೆ ಸಂಗ್ರಹಿಸಿದ ನಿಖರ ಮಾಹಿತಿಯ ಆಧಾರದಲ್ಲಿ ಪಾಷಾನನ್ನು ಬಂಧಿಸಲಾಗಿದೆ.
ಆರೋಪಿಯು ತಾನು 7 ಸರಗಳ್ಳತನ ಪ್ರಕರಣದಲ್ಲಿ ಪಾಲ್ಗೊಂಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಇದರಲ್ಲಿ ಜೆಪಿ ನಗರ ಹಾಗೂ ಬನಶಂಕರಿಯಲ್ಲಿ ತಲಾ 2, ಜಯನಗರ, ಕುಮಾರಸ್ವಾಮಿ ಲೇಔಟ್ ಮತ್ತು ಗಿರಿನಗರಗಳಲ್ಲಿ ತಲಾ ಒಂದೊಂದು ಪ್ರಕರಣದಲ್ಲಿ ಈತನ ಕೈವಾಡವಿತ್ತು.
ಆರೋಪಿಯಿಂದ ವಶಪಡಿಸಿಕೊಂಡ ಚಿನ್ನಾಭರಣಗಳಲ್ಲಿ 10.09 ಲಕ್ಷ ಮೌಲ್ಯದ 326 ಗ್ರಾಂ ತೂಕದ 9 ಚಿನ್ನದ ಸರಗಳು ಸೇರಿದೆ. ಅಲ್ಲದೆ ಅಪರಾಧಕ್ಕೆ ಬಳಸಿದ್ದ ಒಂದು ದ್ವಿಚಕ್ರ ವಾಹನವನ್ನೂ ಸಹ ಪೋಲೀಸರು ವಶಕ್ಕೆ ಪಡೆದಿದ್ದಾರೆ.
"ಈತ ಈ ಹಿಂದೆ ಸಹ ಇಂತಹುದೇ ಪ್ರಕರಣದಲ್ಲಿ ಪಾಲ್ಗೊಂಡು ಜೈಲು ಸೇರಿದ್ದ. ಬೆಂಗಳೂರು ಹಾಗೂ ಮೈಸೂರಿನಲ್ಲಿ ಇವನ ವಿರುದ್ಧ ದೂರು ದಾಖಲಾಗಿತ್ತು. ಜಾಮೀನಿನ ಮೇಲೆ ಹೊರಬಂದಿದ್ದ ಈತ ಆಟೋ ರಿಕ್ಷಾ ಚಲಾಯಿಸಿ ಜೀವನ ಸಾಗಿಸುತ್ತಿದ್ದ. ಆದರೆ ಸುಲಭವಾಗಿ ಹಣ ಗಳಿಸುವ ಕಾರಣದಿಂದ ಮತ್ತೆ ಸರಗಳ್ಳತನಕ್ಕೆ ಇಳಿದಿದ್ದಾನೆ.ಈತನ ಸ್ನೇಹಿತ ಇಮ್ರಾನ್ ಅಲಿಯಾಸ್ ಬಚ್ಚನ್ ತಪ್ಪಿಸಿಕೊಂಡಿದ್ದಾನೆ" ಪೋಲೀಸರು ಹೇಳಿದ್ದಾರೆ.
SCROLL FOR NEXT