ರಾಜ್ಯ

ಉಡುಪಿ: ವಯೋವೃದ್ಧರ ಆಧಾರ್ ಸಮಸ್ಯೆಗೆ ಪ್ರಧಾನ ಮಂತ್ರಿ ಕಚೇರಿ ಮಧ್ಯಪ್ರವೇಶದ ನಂತರ ಪರಿಹಾರ

Sumana Upadhyaya

ಉಡುಪಿ: ತನ್ನ ಆಧಾರ್ ಕಾರ್ಡಿನಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಲು ವಿವಿಧ ಕಚೇರಿಗೆ ಅಲೆದ ಪಡುಬಿದ್ರಿಯ ಹೆಜಮಾಡಿಯ ಹಿರಿಯ ನಾಗರಿಕರೊಬ್ಬರು ಕೊನೆಗೂ ಬೇಸತ್ತು ಪ್ರಧಾನಿ ಕಚೇರಿಗೆ ಪತ್ರ ಬರೆದಿದ್ದಾರೆ. ಅವರು ಬರೆದ ಪತ್ರಕ್ಕೆ ಪ್ರಧಾನಿ ಕಚೇರಿಯಿಂದ ಸ್ಪಂದನೆ ಸಿಕ್ಕಿದ್ದು ಇದೀಗ ಬದಲಾವಣೆಯ ಆಧಾರ್ ಕಾರ್ಡನ್ನು ಪಡೆದುಕೊಂಡಿದ್ದಾರೆ.

ಮಹಾರಾಷ್ಟ್ರ ರಾಜ್ಯ ವಿದ್ಯುಚ್ಛಕ್ತಿ ನಿಗಮದ ನಿವೃತ್ತ ನೌಕರ ಮೋಹನ್ ಕೆ ಸುವರ್ಣ, ಅನೇಕ ವರ್ಷಗಳ ಕಾಲ ಮುಂಬೈಯಲ್ಲಿ ನೆಲೆಸಿದ್ದರು. ಅವರು ಅಲ್ಲಿನ ವಿಳಾಸದಲ್ಲಿ ಆಧಾರ್ ಕಾರ್ಡು ಮಾಡಿಸಿಕೊಂಡಿದ್ದರು. ಐದು ವರ್ಷಗಳ ಹಿಂದೆ ಹೆಜಮಾಡಿಗೆ ಬಂದು ನೆಲೆಸಿದರು. ಹೆಜಮಾಡಿಯ ವಿಳಾಸಕ್ಕೆ ಆಧಾರ್ ಕಾರ್ಡಿನ ವಿಳಾಸ ಬದಲಿಸಿಕೊಳ್ಳಬೇಕಾಗಿತ್ತು.

ಇದಕ್ಕಾಗಿ ಅನೇಕ ಕಚೇರಿಗಳಿಗೆ ಹೋಗಿ ವಿಚಾರಿಸಿದರೂ ಪ್ರಯೋಜನವಾಗಲಿಲ್ಲ. ಕಾಪು ಹತ್ತಿರ ನೆಮ್ಮಾಡಿ ಕೇಂದ್ರ ಮತ್ತು ಉಡುಪಿಯ ಬನ್ನಾಜೆಗೆ ಸಹ ಭೇಟಿ ನೀಡಿ ಸಹಾಯ ಕೋರಿದ್ದರು. ಆದರೆ ಯಾರೂ ವಿಳಾಸ ಬದಲಾವಣೆಗೆ ಸಹಾಯ ಮಾಡಿರಲಿಲ್ಲ. ಕಟ್ಟಕಡೆಯದಾಗಿ ಪ್ರಧಾನಿ ಕಚೇರಿಗೆ ಪತ್ರ ಬರೆದರು. ಪ್ರಧಾನ ಮಂತ್ರಿ ಕಚೇರಿ ಮೋಹನ್ ಅವರ ಸಮಸ್ಯೆಯನ್ನು ಪರಿಶೀಲಿಸಿತು. ಕೊನೆಗೂ ಮೋಹನ್ ಅವರಿದ್ದ ಮನೆಬಾಗಿಲಿಗೆ ಬದಲಾವಣೆಯಾದ ವಿಳಾಸಕ್ಕೆ ಆಧಾರ್ ಕಾರ್ಡು ಬಂದು ತಲುಪಿತು. ಕಳೆದ ವರ್ಷ ಸೆಪ್ಟೆಂಬರ್ 12ಕ್ಕೆ ಮೋಹನ್ ಪ್ರಧಾನ ಮಂತ್ರಿ ಕಚೇರಿಗೆ ಪತ್ರ ಬರೆದಿದ್ದರು. ಕೇವಲ 10 ದಿವಸಗಳಲ್ಲಿ ಅವರಿಗೆ ಪ್ರತಿಕ್ರಿಯೆ ಬಂದಿತು.

ಆಧಾರ್ ಕಾರ್ಡಿನಲ್ಲಿ ವಿಳಾಸ ಬದಲಾವಣೆಗೆ ಇಷ್ಟೊಂದು ಕಷ್ಟವೇಕಾಯಿತು ಎಂದು ಕೇಳಿದರೆ ತಮಗೆ ಕಂಪ್ಯೂಟರ್ ಬಳಸಲು ಗೊತ್ತಿಲ್ಲ ಹೀಗಾಗಿ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಗೊತ್ತಿಲ್ಲದ ಕಾರಣ ತೊಂದರೆಯಾಯಿತು ಎನ್ನುತ್ತಾರೆ.

SCROLL FOR NEXT