ನಾಮಪತ್ರ ಸಲ್ಲಿಕೆ ಮಾಡಿದ ಡಿಕೆ ಶಿವಕುಮಾರ್
ಕನಕಪುರ: ಕರ್ನಾಟಕ ವಿಧಾನಸಭಾ ಚುನಾವಣೆ ನಿಮಿತ್ತ ಗುರುವಾರ ರಾಜ್ಯ ಇಂಧನ ಸಚಿವ ಡಿಕೆ ಶಿವಕುಮಾರ್ ಅವರು ಕನಕಪುರದಲ್ಲಿ ತಮ್ಮ ಉಮೇದುವಾರಿಕೆ ಸಲ್ಲಿಕೆ ಮಾಡಿದ್ದು, ಈ ವೇಳೆ ತಮ್ಮ ಬಳಿ 548 ಕೋಟಿಗೂ ಅಧಿಕ ಮೌಲ್ಯದ ಆಸ್ತಿ ಇದೆ ಎಂದು ಘೋಷಿಸಿಕೊಂಡಿದ್ದಾರೆ.
ಗುರುವಾರ ಕನಕಪುರ ತಾಲೂಕಿನ ಕಬ್ಬಾಳುವಿನಲ್ಲಿರುವ ಕಬ್ಬಾಳಮ್ಮ ದೇವಿಗೆ, ಕನಕಪುರದ ಕೆಂಕೇರಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಶಿವಕುಮಾರ್ ನಾಮಪತ್ರ ಸಲ್ಲಿಸಿದರು. ದೇವಾಲಯದಿಂದ ಬೃಹತ್ ರ‍್ಯಾಲಿ ಮೂಲಕ ಸಾವಿರಾರು ಬೆಂಬಲಿಗರೊಡನೆ ತಾಲೂಕು ಕಚೇರಿಗೆ ಆಗಮಿಸಿದ ಸಚಿವರು ಚುನಾವಣಾಧಿಕಾರಿ ಉಮೇಶ್ ಅವರಿಗೆ ನಾಮಪತ್ರ ಸಲ್ಲಿಸಿದರು. ಈ ವೇಳೆ ಪತ್ನಿ ಉಷಾ, ತಾಯಿ ಗೌರಮ್ಮ, ತಮ್ಮ ಡಿ.ಕೆ.ಸುರೇಶ್ ಮತ್ತು ಇತರೆ ಸಚಿವರ ಜೊತೆಗಿದ್ದರು.
ಚುನಾವಣಾ ಅಧಿಕಾರಿಗಳಿಗೆ ಸಚಿವ ಡಿಕೆ ಶಿವಕುಮಾರ್ ನೀಡಿರುವ ಆಸ್ತಿ ವಿವರಗಳ ಅನ್ವಯ ಅವರ ಆಸ್ತಿ ದುಪ್ಪಟ್ಟಾಗಿದೆ ಎಂದು ತಿಳಿದುಬಂದಿದೆ. ಮಾಧ್ಯಮ ವರದಿಯನ್ವಯ ಇಂದು ಡಿಕೆಶಿ ಸಲ್ಲಿಕೆ ಮಾಡಿದ್ದ ಆಸ್ತಿ ವಿವರಗಳಲ್ಲಿ ಅವರ ಬಳಿ ಒಟ್ಟು 548,85,20,592 ರೂಪಾಯಿ ಮೌಲ್ಯದ ಆಸ್ತಿ ಇದೆ ಎಂದು ಘೋಷಿಸಿಕೊಂಡಿದ್ದಾರೆ. ಸುಮಾರು 600 ಕೋಟಿ ರೂಪಾಯಿ ಆಸ್ತಿಯ ಒಡೆಯರಾಗಿರುವ ಡಿಕೆಶಿ, 101 ಕೋಟಿ 77 ಲಕ್ಷದ 80 ಸಾವಿರದ 200 ರೂಪಾಯಿ ಸಾಲ ಮಾಡಿದ್ದಾರೆ. ಡಿಕೆಶಿ ಬಳಿ 548 ಕೋಟಿ ರೂ. ಮೌಲ್ಯದ ಆಸ್ತಿ ಇದ್ದರೆ, ಮಗಳು ಐಶ್ವರ್ಯ ಬಳಿ 102 ಕೋಟಿ ಮೌಲ್ಯದ ಆಸ್ತಿ ಇದೆ. ಪತ್ನಿ ಉಷಾ ಹತ್ತಿರ 86.95 ಕೋಟಿ ರೂ. ಮೌಲ್ಯದ ಆಸ್ತಿ ಇದೆ ಎಂದು ಘೋಷಣೆ ಮಾಡಿದ್ದಾರೆ.
ಇನ್ನು 2013ರ ಚುನಾವಣೆ ವೇಳೆ ಶಿವಕುಮಾರ್ ಅವರು ತಮ್ಮ ಬಳಿ 251 ಕೋಟಿ ರೂಪಾಯಿ ಆಸ್ತಿ ಇದೆ ಎಂದು ಘೋಷಿಸಿಕೊಂಡಿದ್ದರು. ಇದಕ್ಕೂ ಮೊದಲು ಅಂದರೆ 2008ರ ಚುನಾವಣೆ ವೇಳೆ 75 ಕೋಟಿ ರೂಪಾಯಿ ಆಸ್ತಿ ಇದ್ದಿರುವುದಾಗಿ ಡಿಕೆಶಿ ಘೋಷಿಸಿಕೊಂಡಿದ್ದರು ಎನ್ನಲಾಗಿದೆ.