ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೆರೆದಿರುವ ಜನಸಂದಣಿ
ಬೆಂಗಳೂರು: ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆಗೆ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗುತ್ತಿದ್ದು ಇದನ್ನು ಸರಿದೂಗಿಸಲು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಮೂರು ಮಾರ್ಗಗಳಲ್ಲಿ ನೂತನ ಬಸ್ ಸೇವೆ ಪ್ರಾರಂಭಿಸಲಿದೆ.
ಐಟಿಪಿಎಲ್ ನಿಂದ ಕೆಐಎ (ಬೂದಿಗೆರೆ ಕ್ರಾಸ್ ಮಾರ್ಗ), ಶಿವಾಜಿನಗರ/ಎಂಜಿ ರಸ್ತೆ ಯಿಂದ ಕೆಐಎ (ಹೆಣ್ನೂರು ರಸ್ತೆ ಮಾರ್ಗ) ಮತ್ತು ಬನ್ನೇರುಘಟ್ಟ ರಸ್ತೆ (ಗೊಟ್ಟಿಗೆರೆ) ಇಂದ ಕೆಐಎ - ಈ ಮೂರು ಪ್ರಸ್ತಾವಿತ ಮಾರ್ಗಗಳಲ್ಲಿ ಶೀಘ್ರ ಬಿಎಂಟಿಸಿ ಬಸ್ ಸಂಚಾರ ಪ್ರಾರಂಭಗೊಳ್ಳಲಿದೆ."ಪ್ರಾರಂಭದಲ್ಲಿ ದಿನಕ್ಕೆ 30 ರಿಂದ 40 ಟ್ರಿಪ್ ಪ್ರಾರಂಭಿಸಲಿದ್ದೇವೆ.ಜನರ ಪ್ರತಿಕ್ರಿಯೆ ನೋಡಿ ಟ್ರಿಪ್ ಸಂಖ್ಯೆ ಹೆಚ್ಚಳವಾಗಲಿದೆ" ಹಿರಿಯ ಬಿಎಂಟಿಸಿ ಅಧಿಕಾರಿ ಹೇಳಿದರು.
ಬಸ್ ಸಂಚಾರ ಪ್ರಾರಂಬದ ದಿನಾಂಕ ಮಾತ್ರ ಇನ್ನೂ ನಿಗದಿಯಾಗಬೇಕಿದೆ.
ವಿಮಾನ ನಿಲ್ದಾಣಕ್ಕೆ ನಗರದ ವಿವಿಧೆಡೆಗಳಿಂಡ ಉತ್ತಮ ದರ್ಜೆಯ ವೋಲ್ವೋ ಬಸ್ ಸಂಚಾರ ಮೇ 21, 2008ರಿಂದ ಪ್ರಾರಂಭವಾಗಿದ್ದು ಪ್ರಸ್ತುತ 88 ಬಸ್ಸುಗಳು ವಿಮಾನ ನಿಲ್ದಾಣಕ್ಕೆ 612 ಟ್ರಿಪ್ ನಡೆಸುತ್ತದೆ, ಇದರಲ್ಲಿ 304 ಟ್ರಿಪ್ ಗಳು ನಗರದಿಂದ ವಿಮಾನ ನಿಲ್ದಾಣಕ್ಕೆ ಸಾಗಿದರೆ 308 ಟ್ರಿಪ್ ಗಳು ವಿಮಾನ ನಿಲ್ದಾಣದಿಂದ ನಗರದೆಡೆ ಸಾಗುತ್ತದೆ.
ಈ ಮಾರ್ಗದ ಬಸ್ ಸಂಚಾರದಿಂದ ನಿಗಮಕ್ಕೆ ಲಾಭದಾಯಕವಾಗಿದೆ. ಹೀಗಾಗಿ ಹೆಚ್ಚುವರಿ ಬಸ್ ಗಳ ಸೇವೆ ಒದಗಿಸಲಾಗುತ್ತಿದೆ."ದಿನನಿತ್ಯದ 88 ಬಸ್ ಗಳಿಂದ ಸರಾಸರಿ 22 ರಿಂದ 23 ಲಕ್ಷ ರೂ. ಆದಾಯ ಲಭಿಸುತ್ತಿದೆ. ಈ ಮಾರ್ಗದಲ್ಲಿ ಹೆಚ್ಚು ಬಸ್ ಓಡಿದರೆ ನಮಗೆ ಹೆಚ್ಚು ಆದಾಯ ಲಭಿಸುತ್ತದೆ."ಅವರು ಹೇಳಿದರು.
ಏತನ್ಮಧ್ಯೆ ಬಸ್ಸುಗಳಲ್ಲಿಯೇ ಫ್ಲೈಟ್ ಬೋರ್ಡಿಂಗ್ ಪಾಸುಗಳನ್ನು ಒದಗಿಸಲು ತೀರ್ಮಾನಿಸಲಾಗಿದ್ದು ಕಿಯೋಸ್ಕ್ಸ್ ಮೂಲಕ ಇದನ್ನು ಜಾರಿಗೊಳಿಸಲು ಯೋಜಿಸಲಾಗಿದೆ. ಆರಂಭದಲ್ಲಿ ಎರಡು ತಿಂಗಳ ಪ್ರಾಯೋಗಿಕ ಕಾರ್ಯಕ್ರಮವನ್ನು ಇದಕ್ಕೆ ಹಮ್ಮಿಕೊಳ್ಳಲಾಗಿದ್ದು ಈ ಯೋಜನೆಗಾಗಿ ಕೆಂಪೇಗೌಡ ಬಸ್ ನಿಲ್ದಾಣ ಹಾಗೂ ಎಲೆಕ್ಟ್ರಾನಿಕ್ ಸಿಟಿಯ ಬಸ್ ಮಾರ್ಗಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಯೋಜನೆ ಫಲಿತಾಂಶಗಲನ್ನು ಇನ್ನಷ್ತೇ ನೋಡಬೇಕಿದೆ ಎಂದು ಅಧಿಕಾರಿಗಳು ಹೇಳಿದರು.