ಬೆಂಗಳೂರು: ಬಿಜೆಪಿ ಪಕ್ಷ ಕ್ಯಾನ್ಸರ್ ಇದ್ದಂತೆ. ನಾನು ಕೋಮುವಾದದ ಮೂಲಕ ಆಳ್ವಿಕೆ ನಡೆಸುವ ಪಕ್ಷದ ವಿರೋಧಿ ಎಂದು ನಟ ಪ್ರಕಾಶ್ ರೈ ಹೇಳಿದ್ದಾರೆ.
ನಗರದಲ್ಲಿ ಇಂದು ಬೆಂಗಳೂರು ಪ್ರೆಸ್ ಕ್ಲಬ್ ಹಾಗೂ ಬೆಂಗಳೂರು ವರದಿಗಾರರ ಕೂಟ ಜಂಟಿಯಾಗಿ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಕಾಶ್ ರೈ, ಮತ್ತೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಬಿಜೆಪಿ ಪಕ್ಷ ಹೆಚ್ಚು ಅಪಾಯಕಾರಿ. ಅಲ್ಪಸಂಖ್ಯಾತರನ್ನು ಆತಂಕಕ್ಕೆ ದೂಡುತ್ತಿದ್ದು, ಕರ್ನಾಟಕ ರಾಜ್ಯವನ್ನು ಕಾಂಗ್ರೆಸ್ ಮುಕ್ತವನ್ನಾಗಿಸುವ ಬಗ್ಗೆ ಮಾತನಾಡುತ್ತಿದೆ. ದೇಶದಲ್ಲಿ ಕೋಮುವಾದಿ ವಿಷ ಬೀಜವನ್ನು ಬಿತ್ತುತ್ತಿದ್ದು, ಕೇಂದ್ರ ಸಚಿವ ಅನಂತಕುಮಾರ್ ಹೆಗ್ಡೆ, ಬೆಳಗಾವಿ ಶಾಸಕ ಸಂಜಯ ಪಾಟೀಲ್ ಅವರಿಗೆ ಈ ದೇಶ ಈ ರಾಜ್ಯವನ್ನು ಹೇಗೆ ಕೊಡುವುದು ಎಂಬ ಪ್ರಶ್ನೆ ಕಾಡುತ್ತಿದೆ ಎಂದರು.
ಇದೇ ವೇಳೆ ವಾಜಪೇಯಿ ಅವರ ಬಗ್ಗೆ ನನಗೆ ಅಪಾರ ಗೌರವವಿದೆ ಎಂದ ನಟ ಪ್ರಕಾಶ್ ರೈ, ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವನಲ್ಲ. ಹಾಗಾಗಿ ಯಾವುದೇ ಪಕ್ಷಕ್ಕೆ ಮತದಾರರು ಮತ ಹಾಕುವಂತೆ ಒತ್ತಡ ಹೇರುವುದಿಲ್ಲ ಎಂದು ಹೇಳಿದರು. ಇಂತಹ ಕ್ಷುಲ್ಲಕ ರಾಜಕೀಯ ಮಾಡುವವರ ವಿರುದ್ಧ ಪ್ರಶ್ನೆ ಮಾಡುವ ಎದೆಗಾರಿಕೆ ಜನರಿಗೆ ಬರಬೇಕು. ಧರ್ಮ ನಮ್ಮ ಸ್ವಂತದ್ದು, ಹಿಂದೂ, ಸಿಕ್ಕ, ಮುಸ್ಲಿಂ, ಲಿಂಗಾಯಿತ, ಕ್ರೈಸ್ತರ ಧರ್ಮಗಳು ರಾಜಕೀಯವಾಗಬಾರದು. ಧರ್ಮಗಳಿಗೆ ದೊಡ್ಡ ಶಕ್ತಿಯಿದೆ. ಪ್ರಾರ್ಥನೆ ಮಾಡಲು ಅಂತಹ ಧರ್ಮಗಳು ಬೇಕು. ಮಠ ಮಂದಿರಗಳಿಗೆ ಭೇಟಿ ನೀಡುವುದು ಸ್ವತಂತ್ರ ಬಂದಾಗಿನಿಂದಲೂ ನಡೆಯುತ್ತಿದೆ. ಯಾವುದೇ ಮತದಾರ ಇವರು ನಮ್ಮ ಜಾತಿ, ನಮ್ಮ ಧರ್ಮ ಎಂದು ಮತ ಚಲಾಯಿಸಬಾರದು ಎಂದು ಪ್ರಕಾಶ್ ರೈ ಹೇಳಿದರು.
ಕಾವೇರಿ ನದಿ ನೀರಿನ ವಿವಾದ ಹಿನ್ನೆಲೆಯಲ್ಲಿ ರಂಜನಿಕಾಂತ್ ಮತ್ತು ಕಮಲಹಾಸನ್ ಅವರು ಉಪವಾಸ ಸತ್ಯಾಗ್ರಹ ನಡೆಸಿದ ಬಗ್ಗೆ ಪ್ರತಿಕ್ರಿಯಿಸಿದ ಅವರು ಕಳೆದ ಹಲವು ದಶಕಕಗಳಿಂದ ಈ ಹೋರಾಟ ನಡೆದುಕೊಂಡು ಬಂದಿದೆ. ಆದರೆ ಇದಕ್ಕೆ ಏಕಕಾಲದಲ್ಲಿ ಪರಿಹಾರ ಸಿಗುವುದಿಲ್ಲ ಅಷ್ಟರಮಟ್ಟಿಗೆ ಸಮಸ್ಯೆ ಹದಗೆಟ್ಟಿದೆ. ಕಾವೇರಿ ವಿವಾದ ಕುರಿತಂತೆ ಪದೇ ಪದೇ ನಡೆಸುವ ಹೋರಾಟಗಾರರಿಗೆ ಕಾವೇರಿ ನದಿ ಎಲ್ಲೆಲ್ಲಿ ಹರಿಯುತ್ತಿವೆ. ಎಷ್ಟು ಕಿಲೋಮೀಟರ್ ನ ವರೆಗೆ ಹರಿಯುತ್ತದೆ. ಎಷ್ಟು ಟಿಎಂಸಿ ನೀರು ಇದೆ ಎಂಬುದೇ ಗೊತ್ತಿಲ್ಲ. ಕಾವೇರಿ ಜೀವನದಿ, ನಾವು ಕನ್ನಡಿಗರ ಪರ ಎಂದು ಹೋರಾಟ ನಡೆಸುವ ಅಗತ್ಯವಿಲ್ಲ ಎಂದು ಹೇಳಿದರು.
ತಾವೇ ಆರಂಭಿಸಿದ ಜಸ್ಟ್ ಆಸ್ಕಿಂಗ್ ಬಗ್ಗೆ ಮಾತನಾಡಿದ ಪ್ರಕಾಶ್ ರೈಯವರು, ಜಸ್ಟ್ ಆಸ್ಕಿಂಗ್ ರಾಜಕೀಯ ಪಕ್ಷವಲ್ಲ. ಅದೊಂದು ವಿಪಕ್ಷವಿದ್ದಂತೆ ಅನ್ಯಾಯ ನಡೆದರೆ ಎಲ್ಲರೂ ಸಂಘಟಿತರಾಗಬೇಕು. ನಾನು ಒಂದು ಮುಖವಾಗಿ ಮಾತನಾಡುವುದಿಲ್ಲ. ಕಾವೇರಿಯಂತಹ ಸಮಸ್ಯೆಗಳಿಗೆ ಎರಡು ರಾಜ್ಯಗಳ ತಜ್ಞರನ್ನು ಸಂಪರ್ಕಿಸುವಂತೆ ಸಾಕ್ಷಿ ಚಿತ್ರ ತಯಾರಿಸಬೇಕು. ಆಗ ದಾಖಲೆಗಳನ್ನು ಇಟ್ಟುಕೊಂಡು ಪ್ರಶ್ನೆ ಮಾಡುವ ಧೈರ್ಯ ಬರುತ್ತದೆ.
ಮಂಗಳೂರು ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ನಿಲ್ಲುವಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ರೈ ಅದೆಲ್ಲ ಸುಳ್ಳು ವದಂತಿ. ನಾನು ರಾಜಕೀಯ ಪ್ರವೇಶ ಮಾಡುವುದಿಲ್ಲ ಎಂದು ಉತ್ತರಿಸಿದರು. ಅಂತೆಯೇ ನಗರದಲ್ಲಿ ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅವರನ್ನು ಭೇಟಿ ಮಾಡಿದ್ದು ಕೆಲ ವಿಷಯಗಳ ಸಂಬಂಧಪಟ್ಟಂತೆ ಇರುವ ವದಂತಿಗಳ ಬಗ್ಗೆ ಪರಿಹಾರ ಕಂಡುಕೊಳ್ಳಬೇಕಿತ್ತು. ಹೊರತು ಜೆಡಿಎಸ್ ಪರವಾಗಿ ಅಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಎಲ್ಲ ಜಿಲ್ಲೆಗಳಲ್ಲಿ ಲೇಖಕರು, ಉಪನ್ಯಾಸಕರು, ನಿವೃತ್ತ ಅಧಿಕಾರಿಗಳನ್ನು ಭೇಟಿ ಮಾಡಿದ್ದೇನೆ. ಎಲ್ಲರನ್ನು ಸಾಹಿತ್ಯ ಬೆಳೆಸಬೇಕು, ರಂಗಭೂಮಿ ಹಾಡಿನ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದುರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos