ವೋಟರ್ ಐಡಿ ಮಾದರಿಯಲ್ಲಿ ಮದುವೆಯ ಆಮಂತ್ರಣ: ಮತದಾನ ಜಾಗೃತಿಗಾಗಿ ವಿಶಿಷ್ಟ ಕಾರ್ಯ
ಹಾವೇರಿ: ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿರುವ ಹಿನ್ನಲೆಯಲ್ಲಿ ಮತದಾನ ಮಾಡುವ ಕುರಿತು ಜಾಗೃತಿ ಮೂಡಿಸಲು ಚುನಾವಣಾ ಆಯೋಗ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಆದರೆ, ಹಾವೇರಿಯಲ್ಲೊಬ್ಬರು ಮತದಾನದ ಅರಿವು ಮೂಡಿಸುವ ಸಲುವಾಗಿ ತಮ್ಮ ಮದುವೆಯ ಆಮಂತ್ರಣ ಪತ್ರಿಕೆಯನ್ನೇ ವೋಟರ್ ಐಡಿ ಮಾದರಿಯಲ್ಲಿ ಮುದ್ರಣ ಮಾಡಿಸಿದ್ದಾರೆ.
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಉಪ್ಪಣಸಿ ಗ್ರಾಮದಲ್ಲಿ ಮದುವೆ ಆಗುತ್ತಿರುವ ಜೋಡಿಗಳು ತಮ್ಮ ಮದುವೆಯ ಆಮಂತ್ರಣ ಪತ್ರಿಕೆಯನ್ನು ವೋಟರ್ ಐಡಿ ಮಾದರಿಯಲ್ಲಿ ಮುದ್ರಣ ಮಾಡಿಸಿದ್ದಾರೆ.
ಸಿದ್ದಪ್ಪ ಜ್ಯೋತಿ ಎಂಬುವವರನ್ನು ಇದೇ ಏ.27 ರಂದು ಮದುವೆಯಾಗಲಿದ್ದಾರೆ. ಮದುವೆಯ ಆಮಂತ್ರಣ ಪತ್ರಿಕೆಯನ್ನು ವೋಟರ್ ಐಡಿ ಮಾದರಿಯಲ್ಲಿ ಮಾಡಿಸಿದ್ದಾರೆ. ಈ ಮೂಲಕ ಮತದಾನ ಪ್ರಮಾಣ ಹೆಚ್ಚಿಸುವುದರ ಜೊತೆಗೆ ಹೊಸ ಟ್ರೆಂಡ್ ವೊಂದನ್ನು ಹುಟ್ಟು ಹಾಕಿದ್ದಾರೆ.
ವೋಟರ್ ಐಟಿ ಮಾದರಿಯಲ್ಲಿ ಮುದ್ರಿಸಿರುವ ಆಮಂತ್ರಣ ಪತ್ರಿಕೆಯಲ್ಲಿ ದೊಡ್ಡಚಿಕ್ಕಣ್ಣನವರ ಬಂಧುಗಲ ಮದುವೆಯ ಸಂಭ್ರಮ ಎಂಬ ತಲೆ ಬರಹ ಹಾಕಿದ್ದು, ಎಸ್'ಜೆಎಂಆರ್'ಜಿ 27042018 ಎಂದು ವೋಟರ್ ಐಡಿ ಕಾರ್ಡ್ ನಂಬರ್ ಹಾಕಿದ್ದಾರೆ. ಇದರ ಅರ್ಧ ಸಿದ್ದಪ್ಪ-ಜ್ಯೋತಿ ವಿವಾಹ 27-4-2018 ಎಂಬ ಅರ್ಥವನ್ನು ಕೊಡುತ್ತದೆ.
ಕೆಳಗೆ ಮತದಾರರ ಹೆಸರು ಬರುವ ಸ್ಥಳದಲ್ಲಿ ಮಧುಮಕ್ಕಳ ಹೆಸರು ಎಂದು ಹಾಕಿ ಚಿ.ಸಿದ್ದಪ್ಪ ಮತ್ತು ಚಿ.ಕು.ಸೌ.ಜ್ಯೋತಿ ಎಂದು ಮುದ್ರಿಸಿದ್ದಾರೆ. ಜನ್ಮ ದಿನಾಂಕದ ಬದಲಿಗೆ ಮದುವೆ ದಿನಾಂಕ ಎಂದು ಮುದ್ರಿಸಿ, 27-4-2018, ಸಮಯ 12.30 ಎಂದು ನಮೂದಿಸಿದ್ದಾರೆ.
ಮದುವೆ ನಡೆಯುವ ಸ್ಥಳ ಹಾಗೂ ಕುಟುಂಬದ ಹೆಸರು ಮತ್ತು ತಮ್ಮ ಆಗಮನಾಭಿಲಾಷಿಗಳು ಎಂದು ನಮೂದಿಸಿದ್ದಾರೆ. ಇದಲ್ಲದೆ, ಸಂದೇಶವನ್ನೂ ನೀಡಿರುವ ಜೋಡಿಗಳು, ಜೀವ ಉಳಿಸಲು ರಕ್ತದಾನ, ದೇಶ ಕಟ್ಟಲು ಮತದಾನ. ಮತದಾನ ಮಹಾದಾನ, ಭವಿಷ್ಯದ ರಾಷ್ಟ್ರ ನಿರ್ಮಾಣಕ್ಕೆ ಕಾರಣ. ಮತವೆಂಬ ಅಸ್ತ್ರ ಬಳಸಿ, ಪ್ರಾಮಾಣಿಕರನ್ನು ಆರಿಸುವ ಪ್ರಭುದ್ಧರು ನಾವು. ಮದುವೆಗೆ ತಪ್ಪದೇ ಬನ್ನಿ, ಮತದಾನ ಕಡ್ಡಾಯವಾಗಿ ಮಾಡಿ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos