ಕನ್ನಡ ಅಥವಾ ಇಂಗ್ಲೀಷ್'ನಲ್ಲಿ ಟ್ವೀಟ್ ಮಾಡಿ, ಹಿಂದಿ ಅರ್ಥವಾಗುವುದಿಲ್ಲ; ಬಿಜೆಪಿ ಕಾಲೆಳೆದ ಸಿಎಂ ಸಿದ್ದು
ಬೆಂಗಳೂರು; ಸರ್, ಕನ್ನಡ ಅಥವಾ ಇಂಗ್ಲೀಷ್ ನಲ್ಲಿ ಟ್ವೀಟ್ ಮಾಡಿ, ನನಗೆ ಹಿಂದಿ ಅರ್ಥವಾಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ರಾಜ್ಯ ಉಸ್ತುವಾರಿ ಪಿ. ಮುರುಳೀಧರ ರಾವ್ ಅವರ ಕಾಲೆಳೆದಿದ್ದಾರೆ.
ನಿನ್ನೆಯಷ್ಟೇ ಮುರಳೀಧರ ರಾವ್ ಅವರು ಹಿಂದಿಯಲ್ಲಿ ಸಿದ್ದರಾಮಯ್ಯ ಅವರೇ ಹೆದರಿಬಿಟ್ಟಿರಾ? ಬಹಳ ಕಷ್ಟಪಟ್ಟು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರವನ್ನು ಆಯ್ದುಕೊಂಡಿದ್ದೀರಿ. ಈಗ ಅಲ್ಲಿಯೂ ಸೋಲವು ಸೂಚನೆಗಳು ಕಂಡಾಗ ಬೇರೆ ಕ್ಷೇತ್ರ ಹುಡುಕುತ್ತಿದ್ದೀರಿ. ನಾನು ನಮ್ಮ ಸಂದೇಹವನ್ನು ನಿವಾರಿಸುತ್ತೇನೆ. ನಿಮ್ಮ ಎರಡೂ ಕ್ಷೇತ್ರಗಳು ಮಾತ್ರವಲ್ಲ, ಇಡೀ ಕರ್ನಾಟಕವೇ ಕಾಂಗ್ರೆಸ್ ಮುಕ್ತ ಮಾಡಲು ಹೊರಟಿದ್ದೇವೆಂದು ಹೇಳಿದ್ದರು.
ಈ ಟ್ವೀಟ್'ಗೆ ಪ್ರತಿಕ್ರಿಯೆ ಕನ್ನಡದಲ್ಲಿಯೇ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಅವರು, ಸರ್, ಕನ್ನಡ ಅಥವಾ ಇಂಗ್ಲೀಷ್ ನಲ್ಲಿ ಟ್ವೀಟ್ ಮಾಡಿ. ನನಗೆ ಹಿಂದಿ ಅರ್ಥವಾಗುವುದಿಲ್ಲ ಎಂದು ಹೇಳಿ, ಬಿಜೆಪಿ ನಾಯಕರ ಕಾಲೆಳೆದರು.
ನಂತರ ಮುರುಳೀಧರ ರಾವ್ ಅವರು ಹಿಂದಿಯಲ್ಲಿ ಮಾಡಿದ್ದ ಟ್ವೀಟ್'ನ್ನು ಕನ್ನಡಕ್ಕೆ ಭಾಷಾಂತರಿಸಿ ಮತ್ತೆ ಟ್ವೀಟ್ ಮಾಡಿದರು.
ಸಿದ್ದರಾಮಯ್ಯ ಅವರೇ ಭಯವಾಯಿಯೇ? ಭಾರಿ ಮಸಲತ್ತು ಮಾಡಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧೆಗೆ ಮುಂದಾಗಿದ್ದೀರಿ. ಅಲ್ಲಿ ಕೂಡ ಸೋಲು ಕಣ್ಣಮುಂದೆ ಕಂಡ ಹಿನ್ನಲೆಯಲ್ಲಿ 2ನೇ ಕ್ಷೇತ್ರ ಹುಡುಕುವ ಮೂಲಕ ಎರಡು ದೋಣಿಯಲ್ಲಿ ಕಾಲಿಡಲು ಹೊರಟಿದ್ದೀರಿ. ಚಿಂತೆ ಬೇಡ, ನಿಮ್ಮ ಗೊಂದಲಗಳನ್ನು ನಾನು ಬಗೆಹರಿಸುತ್ತೇನೆ. ನಾವು ಇಡೀ ಕರ್ನಾಟಕವನ್ನೇ ಕಾಂಗ್ರೆಸ್ ಮುಕ್ತ ಮಾಡುತ್ತೇತವೆಂದು ಹೇಳಿದರು.
ನಂತರ ಸಿದ್ದರಾಮಯ್ಯ ಅವರಿಗೆ ಮತ್ತೊಮ್ಮೆ ತಿರುಗೇಟು ನೀಡಲು ಕರ್ನಾಟಕ ಸರ್ಕಾರ ಈ ಹಿಂದೆ ನೀಡಿದ್ದ ಉರ್ದು ಜಾಹೀರಾತುಗಳ ಚಿತ್ರಗಳನ್ನು ಟ್ವೀಟ್ ಮಾಡಿದ ಬಿಜೆಪಿ, ಸಿದ್ದರಾಮಯ್ಯ ಸರ್, ನೀವು ಮತ್ತು ನಿಮ್ಮವರು ಹಿಂದಿ, ಉರ್ದು ಭಾಷೆಗಳಲ್ಲಿ ಜಾಹೀರಾತು ಕೊಟ್ಟಾಗ ನಮಗೂ ಅರ್ಥವಾಗಿರಲಿಲ್ಲ ಸರ್ ಎಂದು ಛೇಡಿಸಿದರು.
ನಂತರ ಮತ್ತೊಂದು ಟ್ವೀಟ್ ಮಾಡಿದ ಸಿದ್ದರಾಮಯ್ಯ ಅವರು, ಮುರಳೀಧರ್ ಅವರು ಕನ್ನಡ ಕಲಿತಿದ್ದರಿಂದ ನನಗೆ ಖುಷಿಯಾಗಿದೆ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.