ಬೆಂಗಳೂರು: ನಗರದ ವೆಸ್ಟ್ ಆಫ್ ಕಾರ್ಡ್ ರಸ್ತೆಯ ಗಣಪತಿ ದೇವಸ್ಥಾನದ ಹತ್ತಿರ ಗುದ್ದೋಡಿ ಪ್ರಕರಣವೊಂದರಲ್ಲಿ ಅಂತಿಮ ವರ್ಷದ ಬಿ.ಕಾಂ ವಿದ್ಯಾರ್ಥಿನಿ ಸ್ಥಳದಲ್ಲಿಯೇ ಮೃತಪಟ್ಟರೆ ಆಕೆಯ ಸ್ನೇಹಿತ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.
ಅಪಘಾತಕ್ಕೆ ಕಾರಣವಾಗಿರುವ ಖಾಸಗಿ ಬಸ್ ಚಾಲಕನಿಗಾಗಿ ಮಲ್ಲೇಶ್ವರ ಸಂಚಾರಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಮೃತ ವಿದ್ಯಾರ್ಥಿನಿಯನ್ನು ವಿದ್ಯಾರಣ್ಯಪುರದ ತಿಂಡ್ಲು ನಿವಾಸಿ ಚೈತ್ರಾ ಎಂದು ಗುರುತಿಸಲಾಗಿದ್ದು ಕೊಡಿಗೆಹಳ್ಳಿಯ ಖಾಸಗಿ ಕಾಲೇಜಿನಲ್ಲಿ ಅಂತಿಮ ವರ್ಷದ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದಳು. ಚೈತ್ರಾ ತನ್ನ ಸ್ನೇಹಿತ ಸಂಜಯ ಜೊತೆ ಬೈಕ್ ನಲ್ಲಿ ಹಿಂಬದಿ ಕುಳಿತುಕೊಂಡು ಸ್ನೇಹಿತೆಯೊಬ್ಬಳ ಮದುವೆ ನಿಶ್ಚಿತಾರ್ಥಕ್ಕೆ ರಾಜಾಜಿನಗರಕ್ಕೆ ಹೋಗುತ್ತಿದ್ದರು. ನಿನ್ನೆ ಸಾಯಂಕಾಲ 8.15ರ ಸುಮಾರಿಗೆ ವೆಸ್ಟ್ ಆಫ್ ಕಾರ್ಡ್ ರಸ್ತೆಯ ಗಣಪತಿ ದೇವಸ್ಥಾನದ ಹತ್ತಿರ ಹೋಗುತ್ತಿದ್ದಾಗ ಖಾಸಗಿ ಬಸ್ಸೊಂದು ಇವರ ಬೈಕ್ ಗೆ ಢಿಕ್ಕಿ ಹೊಡೆಯಿತು. ಇದರ ಪರಿಣಾಮ ಇಬ್ಬರೂ ಬೈಕ್ ನಿಂದ ಕೆಳಗೆ ಬಿದ್ದರು. ತಲೆಗೆ ಗಂಭೀರ ಗಾಯಗೊಂಡು ಚಿತ್ರಾ ಸ್ಥಳದಲ್ಲಿಯೇ ಅಸುನೀಗಿದರೆ ಸಂಜಯ್ ಸಣ್ಣಪುಟ್ಚ ಗಾಯಗಳಿಂದ ಪಾರಾಗಿದ್ದಾರೆ.
ಬಸ್ ಚಾಲಕ ವಾಹನವನ್ನು ನಿಲ್ಲಿಸದೆ ಸ್ಥಳದಿಂದ ಪರಾರಿಯಾಗಿದ್ದ. ಬಸ್ಸಿನ ಸಂಖ್ಯೆ ಸಿಕ್ಕಿದ್ದು ಸದ್ಯದಲ್ಲಿಯೇ ಚಾಲಕನನ್ನು ಬಂಧಿಸಲಾಗುವುದು. ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ ಬಸ್ ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣವೆನ್ನಲಾಗಿದೆ ಎಂದು ಪೊಲೀಸರು ಹೇಳುತ್ತಾರೆ.
ಮಲ್ಲೇಶ್ವರ ಸಂಚಾರಿ ಠಾಣೆಯಲ್ಲಿ ಕೇಸು ದಾಖಲಾಗಿದೆ.