ರಾಜ್ಯ

ಬೆಂಗಳೂರಿನ ಮಕ್ಕಳಿಗೆ ಉತ್ತರ ಕರ್ನಾಟಕ ಶಾಲೆಗಳಲ್ಲಿ ಸೀಟು: ಇದು ಆರ್ ಟಿಇ ಅವಾಂತರ!

Sumana Upadhyaya

ಬೆಂಗಳೂರು: ಶಿಕ್ಷಣ ಹಕ್ಕು ಕಾಯ್ದೆಯಡಿ ತಮ್ಮ ಮಗನಿಗೆ ಸೀಟು ಸಿಕ್ಕಿದ್ದು ನೋಡಿ 36 ವರ್ಷದ ದ್ವಿಚಕ್ರ ಸೇವಾ ಕೇಂದ್ರದಲ್ಲಿ ಕೆಲಸ ಮಾಡುತ್ತಿರುವ ರಾಮಸ್ವಾಮಿಯವರಿಗೆ ಖುಷಿಯಾಗುವ ಬದಲು ಆಘಾತವುಂಟಾಗಿತ್ತು. ಬೆಂಗಳೂರಿನಲ್ಲಿರುವ ಅವರ ಮಗನಿಗೆ ಸೀಟು ಸಿಕ್ಕಿದ್ದು ಗದಗ ಜಿಲ್ಲೆಯ ಶಾಲೆಯೊಂದರಲ್ಲಿ. ಇಷ್ಟೆಲ್ಲಾ ಅವಾಂತರಕ್ಕೆ ಕಾರಣ ತಾಂತ್ರಿಕ ದೋಷ.

ಇದು ರಾಮಸ್ವಾಮಿಯೊಬ್ಬರ ಕಥೆಯಲ್ಲ, ಇಂತಹ ಸಮಸ್ಯೆ ಇತರ 87 ಪೋಷಕರಿಗೆ ಆಗಿದೆ. ಇಂತಹ ಸಮಸ್ಯೆ ಹೊತ್ತು ಅವರೀಗ ಸಾರ್ವಜನಿಕ ಶಿಕ್ಷಣ ಇಲಾಖೆಯ ಮೊರೆ ಹೋಗಿದ್ದಾರೆ. ಈ ಬಗ್ಗೆ ಶಿಕ್ಷಣ ಇಲಾಖೆಯನ್ನು ಸಂಪರ್ಕಿಸಿದಾಗ ಅಲ್ಲಿನ ಅಧಿಕಾರಿಗಳು ಸುದ್ದಿಯನ್ನು ಖಚಿತಪಡಿಸಿದ್ದಾರೆ. ಇದು ಒಂದು ಗಣಕಯಂತ್ರದಿಂದ ಇನ್ನೊಂದು ಯಂತ್ರಕ್ಕೆ ದಾಖಲೆಗಳನ್ನು ಅಪ್ ಲೋಡ್ ಮಾಡುವಾಗ ಈ ತಾಂತ್ರಿಕ ದೋಷವುಂಟಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಆದರೆ ಬೆಂಗಳೂರಿನಲ್ಲಿ ತಾವು ವಾಸಿಸುತ್ತಿರುವ ವಾರ್ಡುಗಳ ಹತ್ತಿರದ ಶಾಲೆಗಳಿಗೆ ಅರ್ಜಿ ಸಲ್ಲಿಸಿದ್ದಕ್ಕೆ ಹೊರ ಜಿಲ್ಲೆಗಳಲ್ಲಿ ಸೀಟು ಸಿಕ್ಕಿರುವುದು ಪೋಷಕರಿಗೆ ಆಘಾತವುಂಟುಮಾಡಿರುವುದಂತೂ ಸತ್ಯ. ನನ್ನ ಮಗಳಿಗೆ ಯಾದಗಿರಿಯ ಶಾಲೆಯೊಂದರಲ್ಲಿ ಸೀಟು ಸಿಕ್ಕಿರುವುದು ನೋಡಿ ನಿಜಕ್ಕೂ ದಂಗಾಗಿ ಹೋದೆ. ಶಿಕ್ಷಣ ಇಲಾಖೆಗೆಫೋನ್ ಮಾಡಿ ಕೇಳಿದರೆ ಸರಿಯಾದ ಪ್ರತಿಕ್ರಿಯೆ ಸಿಗಲಿಲ್ಲ. ನಂತರ ಖುದ್ದಾಗಿ ಹೋಗಿ ಅಧಿಕಾರಿಗಳನ್ನು ಭೇಟಿ ಮಾಡಿದೆ. ಆರಂಭದಲ್ಲಿ ನನ್ನ ಮಾತುಗಳನ್ನು ಕೇಳಿಸಿಕೊಳ್ಳಲು ಕೂಡ ನಿರಾಕರಿಸಿದರು. ನಂತರ ನನ್ನಂತೆ ಇನ್ನು ಕೆಲವು ಪೋಷಕರು ಬಂದು ಕೇಳಿದಾಗ ನನ್ನ ದೂರನ್ನು ಸ್ವೀಕರಿಸಿದರು ಎಂದು ಪೋಷಕರೊಬ್ಬರು ಹೇಳುತ್ತಾರೆ.

ಆನ್ ಲೈನ್ ಲಾಟರಿ ಮೂಲಕ ಆರ್ ಟಿಇ ಕೋಟಾದಡಿ ಸೀಟು ಸಿಕ್ಕಿದರೆ ಅದು ಅದೃಷ್ಟ. ಆದರೆ ಬೇರೆ ಜಿಲ್ಲೆಯಲ್ಲಿ ಸೀಟು ಸಿಕ್ಕಿದೆ ಎಂದು ಮೊಬೈಲ್ ಗೆ ಮೆಸೇಜ್ ಬಂದಾಗ ನನ್ನ ಪತ್ನಿ ಖುಷಿಯಿಂದ ಅಳಲು ಆರಂಭಿಸಿದಳು. ಆದರೆ ಧಾರವಾಡದಲ್ಲಿ ಸೀಟು ಸಿಕ್ಕಿದೆ ಎಂದು ಗೊತ್ತಾದಾಗ ನಮ್ಮ ಖುಷಿಯೆಲ್ಲವೂ ಕ್ಷಣದಲ್ಲಿ ಹೊರಟುಹೋಯಿತು ಎಂದು ವೃತ್ತಿಯಲ್ಲಿ ಟೈಲರ್ ಆಗಿರುವ ಮತ್ತೊಬ್ಬ ಪೋಷಕರು ಹೇಳುತ್ತಾರೆ.

ಈ ಮಧ್ಯೆ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಈ 87 ಪೋಷಕರ ಮಕ್ಕಳಿಗೆ ಅವರ ಮನೆಯ ಹತ್ತಿರದ ಶಾಲೆಗಳಲ್ಲಿ ಸೀಟು ಕೊಡಿಸುವಂತೆ ಹೇಳಿದ್ದಾರೆ.

ಎರಡನೇ ಸುತ್ತಿನ ಲಾಟರಿ ಆಯ್ಕೆ ಬರುವ ಮುನ್ನ ಈ ವಿಧ್ಯಾರ್ಥಿಗಳಿಗೆ ಸೀಟು ಹಂಚಿಕೆ ಮಾಡುವಂತೆ ಮೇಲಾಧಿಕಾರಿಗಳಿಂದ ನಮಗೆ ಸೂಚನೆ ಸಿಕ್ಕಿದೆ ಎಂದು ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ತಿಂಗಳ 20ರಂದು ಆರ್ ಟಿಇ ಕೋಟಾದಡಿ ಸುಮಾರು 2.33 ಲಕ್ಷ ಅರ್ಜಿಗಳು ಬಂದಿದ್ದು ಅವುಗಳಲ್ಲಿ 1.52 ಅರ್ಜಿಗಳು ಸೀಟು ಹಂಚಿಕೆಗೆ ಅರ್ಹವಾಗಿವೆ.

SCROLL FOR NEXT