ಬೆಂಗಳೂರು: ಆದಾಯ ಮೀರಿ ಆಸ್ತಿಗಳಿಸಿದ ಆರೋಪದ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ಶುಕ್ರವಾರ ಬೆಳ್ಳಂಬೆಳಗ್ಗೆ 4 ಮಂದಿ ಸರ್ಕಾರಿ ಅದಿಕಾರಿಗಳಿಗೆ ಸೇರಿದ 10 ಸ್ಥಳಗಳ ಮೇಲೆ ದಾಳಿ ನಡೆಸಿದ್ದಾರೆ.
ನಾಲ್ವರು ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿ ಸೇರಿ ಒಟ್ಟು 10 ಸ್ಥಳಗಳಲ್ಲಿ ಎಸಿಬಿ ತಂಡಗಳು ಏಕಸಮಯದಲ್ಲಿ ದಾಳಿ ನಡೆಸಿದ್ದು, ಪರಿಶೀಲನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ಬಾಲಕೋಟೆ ಮುಧೋಳ ತಾಲೂಕಿನ ಕಂದಾಯ ಇನ್ಸ್ ಪೆಕ್ಟರ್ ಸಂಗಪ್ಪಲ್ ಸೂದಿ, ಚಿತ್ರದುರ್ಗದ ತಾಲೂಕು ಪಂಚಾಯತಿ ಎಕ್ಸಿಕ್ಯೂಟಿವ್ ಆಫೀಸರ್ ಬಿ. ಲಕ್ಷ್ಮೀಪತಿ, ಕೋಲಾರದ ಕಂದಾಯ ಇಲಾಖೆ ಅಧಿಕಾರಿ ಮುನಿ ವೆಂಕಟಪ್ಪ, ಮಾಗಡಿ ತಾಲೂಕು ಸೋಲೂರಿನ ಆರೋಗ್ಯ ಸಮುದಾಯ ಕೇಂದ್ರದ ವ್ಯವಸ್ಥಾಪಕ ಎಂಎಲ್, ಗಣೇಶ್ ಮೂರ್ತಿಯವರ ಆಸ್ತಿ ಹಾಗೂ ಕಚೇರಿಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಎಲ್ಲಾ ನಾಲ್ವರು ಅಧಿಕಾರಿಗಳ ವಿರುದ್ದ ಎಸಿಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಧಿಕಾರಿಗಳು ಪರಿಶೀಲನೆಗಳನ್ನು ಮುಂದುವರೆಸಿದ್ದಾರೆಂದು ಮೂಲಗಳು ಮಾಹಿತಿ ನೀಡಿವೆ.