ಬಾಗಲಕೋಟೆ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿದ್ದ ಹೆಲಿಕಾಪ್ಟರ್ ಇಳಿಸುವುದಕ್ಕಾಗಿ ತನ್ನ ಹೊಲವನ್ನು ನಾಶ ಮಾಡಲಾಗಿದೆ ಎಂದು ರೈತನೊಬ್ಬ ಪೋಲೀಸರಿಗೆ ದೂರಿತ್ತ ಘಟನೆ ಬಾಗಲಕೋಟೆ ಜಿಲ್ಲೆ ಇಳಕಲ್ ನಲ್ಲಿ ನಡೆದಿದೆ.
ಅಮಿತ್ ಶಾ ಹೆಲಿಕಾಪ್ಟರ್ ಇಳಿಸಲು ತಾತ್ಕಾಲಿಕ ಹೆಲಿಪ್ಯಾಡ್ ನಿರ್ಮಾಣ ಮಾಡುವ ಸಮಯದಲ್ಲಿ ಹೊಲದ ಬದುವನ್ನು ಹಾಳು ಮಾಡಿದ್ದಾರೆ ಎಂದು ಇಳಕಲ್ ರೈತ ಜಗದೀಶ್ ಕರಡಿ ಪೋಲೀಸರಿಗೆ ದೂರಿತ್ತಿದ್ದಾರೆ.
ಇಳಕಲ್‌ನ ನಾಗೂರು ರಸ್ತೆ ಬಳಿ ಇರುವ ಹೊಲದ ಬದುಗಳನ್ನು ನಾಶಪಡಿಸಿ ಹೆಲಿಪ್ಯಾಡ್ ನಿರ್ಮಾಣ ಮಾಡಲಾಗಿದೆ. ಇದನ್ನು ಪ್ರಶ್ನಿಸಿದ್ದ ರೈತ ಜಗದೀಶ್ ಅವರಿಗೆ ಹುನಗುಂದ ಶಾಸಕ ದೊಡ್ಡಗೌಡ ಪಾಟೀಲ್, ಮಂಜು ಶೆಟ್ಟರ್, ಸುಗೂರೇಶ್ ನಾಗಲೋಟಿ,ಶ್ಯಾಮಸುಂದರ್ ಮೊದಲಾದವರು ಬೆದರಿಕೆ ಹಾಕಿದ್ದಾರೆ. ಈ ಸಂಬಂಧ ಬಿಜೆಪಿ ನಾಯಕರೆಲ್ಲರ ಮೇಲೆ ರೈತ ಜಗದೀಶ್ ಇಳಕಲ್ ನಗರ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಕೂಡಲ ಸಂಗಮದ ಬಸವಣ್ಣನ ಐಕ್ಯ ಸ್ಥಳಕ್ಕೆ ಶನಿವಾರ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಭೇಟಿ ನೀಡುವವರಿದ್ದು ಇಳಕಲ್ ನಗರದಲ್ಲಿ ಶಾ ಅವರ ಸಾರ್ವಜನಿಕ ಸಭೆ ಆಯೋಜಿಸಲಾಗಿತ್ತು ಈ ಕಾರ್ಯಕ್ರಮಕ್ಕೆ ಆಗಮಿಸುವ ಅಮಿತ್ ಶಾ ಅವರ ಹೆಲಿಕಾಪ್ಟರ್ ಇಳಿಯಲು ತ್ಕಾಲಿಕ ಹೆಲಿಪ್ಯಾಡ್ ನಿರ್ಮಿಸಲಾಗಿತ್ತು.