ಬೆಂಗಳೂರು: ಹಿಮಾಚಲ ಪ್ರದೇಶದ ಶಿಮ್ಲಾದಿಂದ ವಾಪಸಾದ ಮೈಸೂರಿನ ಪರಿತ್ಯಕ್ತ ಮಹಿಳೆಗೆ ಸಹಾಯ ಮಾಡಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮಾನವೀಯತೆ ಮೆರೆದಿದ್ದಾರೆ.
ಪತಿಯನ್ನು ತೊರೆದಿದ್ದ 40 ವರ್ಷದ ಮಹಿಳೆಯನ್ನು ಇತ್ತೀಚೆಗೆ ಶಿಮ್ಲಾದ ಪುನರ್ವಸತಿ ಆಸ್ಪತ್ರೆಯಲ್ಲಿ ಪತ್ತೆಹಚ್ಚಲಾಯಿತು. ನಂತರ ಆಕೆಯನ್ನು ರಾಜ್ಯ ಆರೋಗ್ಯಾಧಿಕಾರಿಗಳ ತಂಡ ಬೆಂಗಳೂರಿಗೆ ಕರೆತಂದಿತು ಎಂದು ಮುಖ್ಯಮಂತ್ರಿಗಳ ಕಚೇರಿಯ ಹೇಳಿಕೆ ತಿಳಿಸಿದೆ.
ಸುರಕ್ಷತೆ ಮತ್ತು ಭದ್ರತೆ ದೃಷ್ಟಿಯಿಂದ ಮಹಿಳೆಯ ಗುರುತನ್ನು ಗೌಪ್ಯವಾಗಿಡಲಾಗಿತ್ತು. ಮಹಿಳೆಯನ್ನು ನಿನ್ನೆ ಮುಖ್ಯಮಂತ್ರಿ ಕಚೇರಿ ಸಿಬ್ಬಂದಿಯ ಭದ್ರತೆಯಲ್ಲಿ ಕರೆತರಲಾಯಿತು. ಆಕೆಯ ವೈದ್ಯಕೀಯ ವೆಚ್ಚ ಮತ್ತು ಪುನರ್ವಸತಿಗೆ ವ್ಯವಸ್ಥೆ ಮಾಡುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ.
ತಮಗೊಂದು ನೆಲೆಸಲು ಮನೆ ಮತ್ತು ಪತಿಯನ್ನು ಹುಡುಕಲು ನೆರವು ನೀಡಿ ಎಂದು ಮುಖ್ಯಮಂತ್ರಿಯಲ್ಲಿ ಕೇಳಿಕೊಂಡ ಮಹಿಳೆಗೆ ಅಗತ್ಯ ನೆರವು ನೀಡುವಂತೆ ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಗೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ.
ಮಹಿಳೆಯನ್ನು ಕಾಪಾಡುವಲ್ಲಿ ನೆರವಾದ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಮತ್ತು ಅವರ ಪತ್ನಿ ಕರ್ನಾಕದವರೇ ಆದ ಸುಧಾನ ಠಾಕೂರ್ ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅಭಿನಂದನೆ ಸಲ್ಲಿಸಿದರು. ಮಹಿಳೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಮ್ಮ ಮನೆ ವಸತಿ ನೆಲೆಯಲ್ಲಿ ಆಶ್ರಯ ಕಲ್ಪಿಸಲಾಗಿದೆ. ಆಕೆಯ ಆರೋಗ್ಯ ಸುಧಾರಿಸಿದ ನಂತರ ಮೈಸೂರಿನಲ್ಲಿರುವ ತಾಯಿಯ ಮನೆಗೆ ಕಳುಹಿಸಲಾಗುತ್ತದೆ.
ನಡೆದ ಘಟನೆಯೇನು?: ಮೈಸೂರಿನ ಮಾಕನಹಳ್ಳಿಯಿಂದ ಎರಡು ವರ್ಷಗಳ ಹಿಂದೆ ಪತಿ ತೊರೆದ ಮಹಿಳೆ ಬೆಂಗಳೂರಿಗೆ ಗಾರ್ಮೆಂಟ್ಸ್ ಕೆಲಸ ಹುಡುಕಿಕೊಂಡು ಬರಲು ಯೋಚಿಸಿದ್ದರು.ಆದರೆ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಆಕೆ ತಪ್ಪಿಹೋಗಿ ಹಿಮಾಚಲ ಪ್ರದೇಶದ ಕಾಂಗ್ರಾದಲ್ಲಿ ಹೋಗಿ ಇಳಿದಿದ್ದರು. ಅಲ್ಲಿ ಆಕೆಯನ್ನು ಯಾರೋ ಶಿಮ್ಲಾದಲ್ಲಿರುವ ಸರ್ಕಾರಿ ಮಾನಸಿಕ ಆರೋಗ್ಯ ಆಸ್ಪತ್ರೆಗೆ 2016ರಲ್ಲಿ ದಾಖಲಿಸಿದ್ದರು. ಕಳೆದ ಜುಲೈ ಮಧ್ಯಭಾಗದಲ್ಲಿ ವಿಮಾನದಲ್ಲಿ ಹೋಗುತ್ತಿದ್ದಾಗ ಮಹಿಳೆಯ ಸ್ಥಿತಿ ಬಗ್ಗೆ ತಿಳಿದ ಮಾಧ್ಯಮವೊಂದರ ಪ್ರತಿನಿಧಿ, ವರದಿ ಮಾಡಿದ್ದರು. ವರದಿ ಅನುಸಾರ ಆರೋಗ್ಯ ಇಲಾಖೆ ಅಧಿಕಾರಿಗಳು ಹಿಮಾಚಲ ಪ್ರದೇಶದ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ.
ಮಹಿಳೆಗೆ ಇಷ್ಟುದಿನ ಭಾಷೆಯ ಸಮಸ್ಯೆಯಿಂದಾಗಿ ಶಿಮ್ಲಾದಿಂದ ತನ್ನ ಮನೆಯವರನ್ನು ಸಂಪರ್ಕಿಸಲು ಸಾಧ್ಯವಾಗಿರಲಿಲ್ಲ. ಮತ್ತು ಅಲ್ಲಿಗೆ ಹೇಗೆ ಹೋದೆ, ಎಲ್ಲಿಂದ ಬಂದೆ ಎಂದು ಹೇಳಲು ಕೂಡ ಅಲ್ಲಿನ ಅಧಿಕಾರಿಗಳಿಗೆ ಮಾಹಿತಿ ನೀಡಲು ಸಾಧ್ಯವಾಗಿರಲಿಲ್ಲ.