ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಸರಗಳ್ಳತನದ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ನಗರದ ಪ್ರತಿಷ್ಠಿತ ದೇಗುಲವೊಂದರಲ್ಲಿ ಹಾಡಹಗಲೇ ಕದೀಮರು ಮಹಿಳೆಯೊಬ್ಬರ ಸರ ಕದ್ದು ಪರರಾರಿಯಾಗಿರುವ ಘಟನೆ ನಡೆದಿದೆ.
ದೇಗುದಲ್ಲಿ ನೂರಾರು ಭಕ್ತಾದಿಗಳು ಇರುವ ಸಂದರ್ಭದಲ್ಲಿಯೇ ಕಳ್ಳರು ತಮ್ಮ ಕೈಚಳಕವನ್ನು ತೋರಿಸಿದ್ದಾರೆ. ಶಾಂತಾ.ಪಿ ರೂ.1.8 ಲಕ್ಷ ಮೌಲ್ಯದ ಸರವನ್ನು ಕಳೆದುಕೊಂಡ ಮಹಿಳೆಯಾಗಿದ್ದಾರೆ.
ಕಳೆದ ಶುಕ್ರವಾರ ಬೆಳಿಗ್ಗೆ 11.30ರ ಸುಮಾರಿಗೆ ಶಾಂತಾ ಅವರು ಬಸವನಗುಡಿಗೆ ಬಂದಿದ್ದಾರೆ. ಸಾಲಿನಲ್ಲಿ ನಿಂತಿದ್ದ ವೇಳೆ ಭಕ್ತರಂತೆ ನಿಂತಿದ್ದ ಕದೀಮರು ಸರವನ್ನು ಕಳ್ಳತನ ಮಾಡಿದ್ದಾರೆ. ಪೂಜೆ ಸಲ್ಲಿಸಿದ ಬಳಿಕ ದೇವಸ್ಥಾನದಿಂದ ಹೊರಬಂದ ಶಾಂತರವರಿಗೆ ತಮ್ಮ ಸರ ಕಳ್ಳತನವಾಗಿರುವುದು ತಿಳಿದಿದೆ. ಕೂಡಲೇ ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸ್ಥಳೀಯ ಸಿಸಿಟಿವಿ ದೃಶ್ಯಾವಳಿಗಳನ್ನು ತಪಾಸಣೆ ಮಾಡಿದ್ದು, 40 ವರ್ಷದ ವ್ಯಕ್ತಿಯೊಬ್ಬ ಸರಗಳ್ಳತನ ಮಾಡಿರಬಹುದು ಎಂಬುದಾಗಿ ತಿಳಿದುಬಂದಿದೆ. ಇದೀಗ ಕದೀಮನಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ.