ರಾಜ್ಯ

ಬಲವಂತವಾಗಿ ಮಕ್ಕಳಿಂದ ಬಟ್ಟೆ ಒಗೆಸಿದ ದೈಹಿಕ ಶಿಕ್ಷಕ; ಕೊಪ್ಪಳದಲ್ಲಿ ಅಮಾನವೀಯ ಕೃತ್ಯ

Sumana Upadhyaya

ಕೊಪ್ಪಳ: ಜಿಲ್ಲೆಯ ಸರ್ಕಾರಿ ಶಾಲೆಯೊಂದರ ದೈಹಿಕ ಶಿಕ್ಷಣ ಶಿಕ್ಷಕರೊಬ್ಬರು ಮಕ್ಕಳಿಗೆ ಆಟದ ಜೊತೆಗೆ ಬೇರೆ ಕೆಲಸ ಮಾಡಿಸುತ್ತಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ. ತಮ್ಮ ಬಟ್ಟೆ ಒಗೆಯಲು ಮಕ್ಕಳಿಗೆ ಹೇಳಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಗಂಗಾವತಿ ತಾಲ್ಲೂಕಿನ ಹೊಸಳ್ಳಿ ಗ್ರಾಮದ ಸರ್ಕಾರಿ ಮಧ್ಯಮ ಪ್ರಾಥಮಿಕ ಶಾಲೆಯಲ್ಲಿ ಸುಮಾರು 230 ವಿದ್ಯಾರ್ಥಿಗಳಿದ್ದಾರೆ. ಮಕ್ಕಳಿಗೆ ರಜೆ ಇರುವ ಶನಿವಾರ ಮತ್ತು ಭಾನುವಾರ ತಮ್ಮ ಬಟ್ಟೆಗಳನ್ನು ವಿದ್ಯಾರ್ಥಿಗಳಲ್ಲಿ ಒಗೆಯಲು ಹೇಳುತ್ತಾರೆ ದೈಹಿಕ ಶಿಕ್ಷಕ ಚಂದ್ರಶೇಖರ್.

''ಅವರ ಮನೆಗೆ ಬಲವಂತ ಮಾಡಿ ನಮ್ಮನ್ನು ಬರಲು ಹೇಳಿ ಅವರ ಬಟ್ಟೆ ಒಗೆಸುತ್ತಾರೆ. ನಾವು ಆಗುವುದಿಲ್ಲ ಸರ್ ಎಂದರೆ ನಮಗೆ ಪಠ್ಯಪುಸ್ತಕಗಳನ್ನು ನೀಡುವುದಿಲ್ಲ'' ಎಂದು ಆರೋಪಿಸುತ್ತಾರೆ.

ಈ ಬಗ್ಗೆ ಶಾಲೆಯ ಮುಖ್ಯೋಪಾಧ್ಯಾಯಿನಿ ಮೋನಮ್ಮ ಅವರನ್ನು ಕೇಳಿದಾಗ ನನಗೆ ಈ ವಿಷಯ ತಿಳಿದಿಲ್ಲ ಎನ್ನುತ್ತಾರೆ. ಶಾಲೆಯ ಬಾಲಕರು ಕಳೆದ ಭಾನುವಾರ ಶಿಕ್ಷಕ ಚಂದ್ರಶೇಖರ್ ಒಗೆದ ಬಟ್ಟೆಗಳನ್ನು ಒಣಗಿಸಲು ತೆಗೆದುಕೊಂಡು ಹೋಗುವುದು ಕಂಡುಬಂತು. ಗ್ರಾಮದ ಕೆಲವರು ಮಕ್ಕಳು ಬಟ್ಟೆ ಒಗೆಯುವುದನ್ನು ವಿಡಿಯೊ ಮಾಡಿಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಹಾಕಿದ್ದು ಅದು ವೈರಲ್ ಆಗಿದೆ.

ಮತ್ತೊಂದು ಘಟನೆಯಲ್ಲಿ, ಇದೇ ಜಿಲ್ಲೆಯ ಯಲಬುರ್ಗ ತಾಲ್ಲೂಕಿನ ವನಗೆರೆ ಗ್ರಾಮದ ಮಾಧ್ಯಮಿಕ ಶಾಲೆಯಲ್ಲಿ ಮಕ್ಕಳಿಂದ ಶಾಲೆಯ ಕಂಪೌಂಡ್ ನ್ನು ಕಟ್ಟಿಸುತ್ತಿದ್ದರು.

SCROLL FOR NEXT