ಹುಬ್ಬಳ್ಳಿ: ಭಾರತದಲ್ಲಿ ಧರ್ಮವೇ ಮೊದಲು, ನಂತರ ಅಭಿವೃದ್ದಿ ಎಂದು ನಗರಾಭಿವೃದ್ದಿ ಸಚಿವ ಯುಟಿ ಖಾದರ್ ಹೇಳಿದ್ದಾರೆ. ಹುಬ್ಬಳ್ಳಿ ಮತ್ತು ಧಾರವಾಡ ನಡುವೆ ಬಸ್ ರಾಪಿಡ್ ಟ್ರಾನ್ಸಿಟ್ ಸಿಸ್ಟಮ್ (ಬಿಆರ್ಟಿಎಸ್) ಕಾರಿಡಾರ್ ಅಭಿವೃದ್ಧಿಪಡಿಸುವ ಸಂಬಂಧ ಧಾರ್ಮಿಕ ಕೇಂದ್ರಗಳನ್ನು ಸ್ಥಳಾಂತರಿಸಲು ಸಾಧ್ಯವಾಗಿಲ್ಲ ಎಂದು ಅವರು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ.
ಧಾರ್ಮಿಕ ಕೇಂದ್ರಗಳ ಸ್ಥಳಾಂತರ ತೀವ್ರ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಅವರು ಮಾತನಾಡಿ ಭಾರತದಲ್ಲಿ ಧರ್ಮವೇ ಮೊದಲ ಪ್ರಾಶಸ್ತ್ಯ ಪಡೆದಿದ್ದು ಅಭಿವೃದ್ದಿ ನಂತರದ ಸ್ಥಾನದಲ್ಲಿದೆ. ಹೀಗಾಗಿ ಯಾವ ಅಭಿವೃದ್ದಿ ಯೋಜನೆಗಾಗಿಯೂ ಧಾರ್ಮಿಕ ಕೇಂದ್ರಗಳ ಸ್ಥಳಾಂತವಾಗುವುದು ಇಲ್ಲಿ ಅಸಾಧ್ಯವಾಗಿದೆ ಎಂದರು.
ಹುಬ್ಬಳ್ಳಿ-ಧಾರವಡದ ನಡುವಿನ ಬಿಆರ್ಟಿಎಸ್ ಕಾರಿಡಾರ್ ನಡುವೆ ಸುಮಾರು 18 ಧಾರ್ಮಿಕ ಕೇಂದ್ರಗಳು ಬರುತ್ತದೆ.. ಇದರಲ್ಲಿ ಉಂಕಲ್ ನಲ್ಲಿನ ದೇವಸ್ಥಾನ ಹಾಗು ಭೈರಿದೇವರಕೊಪ್ಪದಲ್ಲಿನ ಒಂದು ದರ್ಗಾ ಹೊರತುಪಡಿಸಿ ಉಳಿದೆಲ್ಲವನ್ನೂ ಸ್ಥಳಾಂತರಿಸಲಾಗಿದೆ. ಸ್ಥಳೀಯರಿಗೆ ಇದು ಧಾರ್ಮಿಕ ಸೂಕ್ಷ್ಮ ವಿಚಾರವಾಗಿದ್ದು ದರ್ಗಾವನ್ನು ತೆರವುಗೊಳಿಸದೆ ದೇವಸ್ಥಾನವನ್ನು ಮುತ್ಟಲು ಅವಕಾಶವಿಲ್ಲ ಎಂದು ಹೇಳುತ್ತಿದ್ದಾರೆ.
ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವಾಗ ನಮ್ಮಲ್ಲಿ ಮಾತ್ರವಲ್ಲ ದೇಶದ ಎಲ್ಲೆಡೆಗಳಲ್ಲಿ ಇಂತಹಾ ಸಮಸ್ಯೆಗಳು ಉದ್ಭವವಾಗುತ್ತದೆ. ಈ ವಿಷಯವನ್ನು ಸ್ಥಳೀಯ ಜನಪ್ರತಿನಿಧಿಗಳು, ಮತ್ತು ಅಧಿಕಾರಿಗಳು ನಿರ್ವಹಿಸಬೇಕು. ಅಂತಹ ಸೂಕ್ಷ್ಮ ವಿಷಯಗಳ ಕುರಿತು ಸರ್ಕಾರವನ್ನು ಒತ್ತಾಯಿಸಬಾರದು.ಎಂದು ಸಚಿವರು ಹೇಳಿದ್ದಾರೆ. ಖಾದರ್ ಬುಧವಾರ ನಡೆಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಅವರು ವಿವಾದ ಬಗೆಹರಿಸಲು ಮಧ್ಯಸ್ಥಿಕೆದಾರರ ಅಗತ್ಯವನ್ನು ಒಪ್ಪಿಕೊಂಡಿದ್ದಾರೆ.
ವಿವಾದ ಬಗೆಹರಿಸಲು ನೀವೇನು ಮಾಡಬಲ್ಲಿರಿ ಎಂದು ಕೇಳಲಾದ ಪ್ರಶ್ನೆಗೆ ಖಾದರ್ ಮೊದಲಿಗೆ ಮಾಜಿ ಶಾಸಕರು, ಸ್ಥಳೀಯ ಅಧಿಕಾರಿಗಳತ್ತ ಬೊಟ್ಟು ಮಾಡಿ ನುಣುಚಿಕೊಳ್ಳಲು ನೋಡಿದರು. ಆದರೆ ಬಳಿಕ ತಾವು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡುವುದಾಗಿ ಹೇಳಿದ್ದಾರೆ. "ಬಿಆರ್ಟಿಎಸ್ ಯೋಜನೆ ವಿಳಂಬಕ್ಕೆ ಹಲವು ಕಾರಣಗಳಿದೆ. ನನಗೆ ಎಲ್ಲವೂ ಸ್ಪಷ್ಟವಾಗಿಲ್ಲ. ಅಧಿಕಾರಿಗಳು ಈ ಬಗ್ಗೆ ನನಗೆ ಸಾಕಷ್ಟು ವಿವರ ನಿಡಿಲ್ಲ"
ಬಿಆರ್ಟಿಎಸ್ ಯೋಜನೆ ಪೂರ್ಣಗೊಳಿಸಲು ಹೊಸ ಗಡುವನ್ನು ವಿಧಿಸಲಾಗಿದೆ ಎಂದ ಸಚಿವರು ಹೆಚ್ಚಿನ ಸಂಖ್ಯೆಯ ಕೆಲಸಗಾರರನ್ನು ಕೂಡಿಸಿಕೊಳ್ಳುವ ಮೂಲಕ ಗುತ್ತಿಗೆದಾಅರು ಶೀಘ್ರವೇ ಕಾಮಗಾರಿಯನ್ನು ಪೂರ್ಣಗೊಳಿಸುತ್ತಾರೆ. ನವೆಂಬರ್ 1ರಿಂದ ಈ ಕಾರಿಡಾರ್ ನಲ್ಲಿ ಬಸ್ ಸಂಚಾರ ಪ್ರಾರಂಬವಾಗಲಿದೆ ಎಂದು ಖಾದರ್ ಭರವಸೆ ನೀಡಿದ್ದಾರೆ. ಒಂದು ವೇಳೆ ಗುತ್ತಿಗೆದಾರರು ನಿಗದಿತ ವೇಳೆಯಲ್ಲಿ ಕಾಮಗಾರಿ ಮುಗಿಸದೆ ಹೋದಲ್ಲಿ ಅವರನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದು ಎಂದು ಅವರು ಹೇಳಿದರು. ನಾನು ಜವಾಬ್ದಾರಿಯಿಂಡ ನುಣುಚಿಕೊಳ್ಳಲಾರೆ. ಕಾಮಗಾರಿ ಗಡುವಿನೊಳಗೆ ಪೂರ್ಣಗೊಳ್ಳುವುದು ಖಚಿತ ಎಂದು ಸಚಿವರು ಒತ್ತಿ ಹೇಳಿದಾರೆ.