ಎಚ್ ಡಿ ಕುಮಾರಸ್ವಾಮಿ - ದಲೈ ಲಾಮಾ
ಬೆಂಗಳೂರು: ಟಿಬೆಟಿಯನ್ನರಿಗೆ ರಾಜ್ಯದ ಐದು ಕಡೆ ಆಶ್ರಯ ನೀಡಿದ ಕರ್ನಾಟಕಕ್ಕೆ ನನ್ನ ಧನ್ಯವಾದಗಳು ಎಂದು ಟಿಬೆಟಿಯನ್ ಧರ್ಮ ಗುರು ದಲೈ ಲಾಮಾ ಅವರು ಶುಕ್ರವಾರ ಹೇಳಿದ್ದಾರೆ.
'ಧನ್ಯವಾದ ಭಾರತ'ದ ಅಂಗವಾಗಿ ಇಂದು ನಗರದಲ್ಲಿ ಟಿಬೆಟಿಯನ್ನರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ದಲೈ ಲಾಮಾ ಅವರು, ಟಿಬೆಟಿಯನ್ನರ ಗಡಿಪಾರುಗೆ ಈಗ 60 ವರ್ಷ. ಇದನ್ನು ಕೃತಜ್ಞತಾ ವರ್ಷವಾಗಿ ಆಚರಿಸಲಾಗುತ್ತಿದ್ದು, ಇದು ಅವರ ಕೃತಜ್ಞತಾ ಭಾವವನ್ನು ತೋರಿಸುತ್ತದೆ ಎಂದರು.
ಇನ್ನು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು, ರಾಜ್ಯದಲ್ಲಿ ನೆಲೆಸಿರುವ ಟಿಬೆಟಿಯನ್ನರಿಗೆ ಅಗತ್ಯವಾದ ಎಲ್ಲ ನೆರವು ಹಾಗೂ ಸೌಲಭ್ಯ ನೀಡುವುದಾಗಿ ಭರವಸೆ ನೀಡಿದರು.
ಇತ್ತೀಚಿಗಷ್ಟೇ ಜವಾಹರ್ ಲಾಲ್ ನೆಹರೂ ಅವರದ್ದು ಸ್ವಾರ್ಥ ಸ್ವಭಾವ ಎಂದು ಹೇಳಿ, ಬಳಿಕ ಕ್ಷಮೆಯಾಚಿಸಿದ್ದ ದಲೈ ಲಾಮಾ ಅವರು ಇಂದು, ನೆಹರೂ ಅವರ ಸಲಹೆಯನ್ನು ನಾನು ಚೆನ್ನಾಗಿ ಬಳಸಿಕೊಂಡೆ. ಅವರು ಟಿಬೆಟಿಯನ್ ಸಂಸ್ಕೃತಿ ಬಗ್ಗೆ ಮತ್ತು ಟಿಬೆಟಿಯನ್ನರಿಗೆ ಪ್ರತ್ಯೇಕ ಶಾಲೆಗಳನ್ನು ಆರಂಭಿಸುವುದಕ್ಕೆ ಬೆಂಬಲ ನೀಡಿದ್ದರು ಎಂದು ಹೊಗಳಿದರು.