ಬಳ್ಳಾರಿ: ಸಾಮಾನ್ಯವಾಗಿ ಪ್ರಭಾವಿ ವ್ಯಕ್ತಿಗಳು, ದೊಡ್ಡ ದೊಡ್ಡ ಅಧಿಕಾರಿಗಳು ಒಡಾಡಲು ದುಬಾರಿ ವಾಹನಗಳನ್ನು ಅವಲಂಬಿಸಿರುತ್ತಾರೆ. ಆದರೆ ಭಾರತದ ಬ್ರಿಟಿಷ್ ಹೈ ಕಮಿಷನರ್ ಸರ್ ಡೊಮಿನಿಕ್ ಅಸ್ಕ್ವಿತ್ ಮತ್ತು ಅವರ ಪತ್ನಿ ಲೇಡಿ ಅಸ್ಕ್ವಿತ್ ಬೆಂಗಳೂರಿನಿಂದ ಹೊಸಪೇಟೆಗೆ ರೈಲಿನಲ್ಲಿ ಸಾಮಾನ್ಯರಂತೆ ಸಂಚರಿಸಿದರು. ವಿಶ್ವ ಪರಂಪರೆ ತಾಣ ಹಂಪಿಗೆ ಎರಡು ದಿನಗಳ ಖಾಸಗಿ ಭೇಟಿಗಾಗಿ ದಂಪತಿ ಆಗಮಿಸಿದ್ದರು.
ರಾತ್ರಿ ಹಂಪಿ ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಯಾಣ ಮಾಡಿ ನಿನ್ನೆ ಬೆಳಗ್ಗೆ ಹಂಪಿಗೆ ಆಗಮಿಸಿದರು. ನಂತರ ವಿರೂಪಾಕ್ಷ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಹಂಪಿಯಲ್ಲಿ ಕೂಡ ಸಾಮಾನ್ಯ ಪ್ರವಾಸಿಗರಂತೆ ಸುತ್ತಾಡಿದರು. ಇವರಿಗೆ ದೇವಾಲಯದ ಆಡಳಿತ ವರ್ಗದವರು ಭವ್ಯ ಸ್ವಾಗತ ನೀಡಿದರು.
ದೇವಸ್ಥಾನವಿಡೀ ಸುತ್ತುಬಂದ ದಂಪತಿ ನಂತರ ಹಂಪಿಯ ಪ್ರಮುಖ ಸ್ಥಳಗಳಿಗೆ ಭೇಟಿ ನೀಡಿದರು. ಇಲ್ಲಿನ ಸ್ಮಾರಕಗಳನ್ನು ನೋಡಿ ಸಂತೋಷಪಟ್ಟರು.
ಹಂಪಿಯ ಶಿವನ ದೇವಾಲಯ, ಆನೆಯ ಮೂರ್ತಿ, ತಾವರೆ ಅರಮನೆ, ರಾಣಿ ಸ್ನಾನಗೃಹ ಇತ್ಯಾದಿ ಸ್ಮಾರಕಗಳಿಗೆ ಭೇಟಿ ಕೊಟ್ಟರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಯೊಬ್ಬರೂ ಜೀವಿತಾವಧಿಯಲ್ಲಿ ಹಂಪಿಗೆ ಭೇಟಿ ನೀಡಬೇಕು ಎಂದು ಹೇಳಿದರು.
ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ರಂಗರಾಜನ್ ಮಾತನಾಡಿ, ಬ್ರಿಟನ್ ರಾಯಭಾರಿ ಮತ್ತು ಅವರ ಪತ್ನಿಗೆ ತೀವ್ರ ಭದ್ರತೆ ನೀಡಲಾಗಿತ್ತು. ದಂಪತಿ ಖಾಸಗಿ ರೆಸಾರ್ಟ್ ನಲ್ಲಿ ವಾಸಿಸಲಿದ್ದು ನಾಳೆಯವರೆಗೆ ಹಂಪಿಯಲ್ಲಿ ಇರಲಿದ್ದಾರೆ. ವಿದ್ಯಾನಗರ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ವಿಮಾನದಲ್ಲಿ ತೆರಳಲಿದ್ದಾರೆ ಎಂದರು.