ಹಾವೇರಿ: ಇತ್ತೀಚೆಗಷ್ಚೇ ಮಾಧ್ಯಮಗಳಲ್ಲಿ ಸುದ್ದಿಗೆ ಗ್ರಾಸವಾಗಿದ್ದ ಅರೆಬೆಂದ ಸ್ಥಿತಿಯಲ್ಲಿ ಹಾವೇರಿ ವಿದ್ಯಾರ್ಥಿನಿ ಶವವಾಗಿ ಪತ್ತೆಯಾದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ದೊರೆತಿದ್ದು, ವಿದ್ಯಾರ್ಥಿನಿಯನ್ನು ಕೊಂದು ಆಕೆಯ ಶವದ ಮೇಲೆ ಅತ್ಯಾಚಾರ ಮಾಡಲಾಗಿದೆ ಎಂಬ ಆಘಾತಕಾರಿ ಅಂಶವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಮಾಧ್ಯಮವೊಂದರ ವರದಿಯಂತೆ ಅರೆಬೆರೆ ಬೆಂದ ಸ್ಥಿತಿಯಲ್ಲಿ ವರದಹಳ್ಳಿ ಗ್ರಾಮದ ಕಾಲೇಜು ವಿದ್ಯಾರ್ಥಿನಿ ರೇಣುಕಾ ಪಾಟೀಲ್ ರ ಮೃತ ದೇಹ ಪತ್ತೆಯಾದ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಅದೇ ಗ್ರಾಮದ ಸಹೋದರ ಸಂಬಂಧಿಯಿಂದಲೇ ವಿದ್ಯಾರ್ಥಿನಿ ರೇಣುಕಾ ಹತ್ಯೆಯಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸ್ ಮೂಲಗಳು ತಿಳಿಸಿರುವಂತೆ ಬಂಧಿತ ಆರೋಪಿಯನ್ನು 28 ವರ್ಷದ ಶಶಿ ಅಲಿಯಾಸ್ ಮಂಜನಗೌಡ ಪಾಟೀಲ ಎಂದು ಗುರುತಿಸಲಾಗಿದ್ದು. ಈತ ವಿದ್ಯಾರ್ಥಿನಿಗೆ ಸಹೋದರ ಸಂಬಂಧಿಯಾಗಿದ್ದನಂತೆ.
ವಿದ್ಯಾರ್ಥಿನಿ ನಾಪತ್ತೆಯಾದ ದಿನವೇ ಆಕೆಯನ್ನು ಮಂಜನಗೌಡ ಪಾಟೀಲ್ ತನ್ನ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಇದಕ್ಕೆ ರೇಣುಕಾ ವಿರೋಧಿಸಿದಾಗ ಆಕೆಯನ್ನು ಹೊಡೆದು ಕೊಲೆ ಮಾಡಿದ್ದಾನೆ.
ಇನ್ನೂ ಆಘಾತಕಾರಿ ಅಂಶವೆಂದರೆ ರೇಣುಕಾಳನ್ನು ಕೊಲೆ ಮಾಡಿದ ಬಳಿಕವೂ ಸುಮ್ಮನಾಗದ ಪಾಪಿ ಮಂಜನಗೌಡ ಪಾಟೀಲ್ ಆಕೆಯ ಶವದ ಮೇಲೆ ಏರಗಿ ತನ್ನ ಲೈಂಗಿಕ ದೌರ್ಜನ್ಯವೆಸಗಿದ್ದಾನೆ.
ತನ್ನ ಪಾಪಾ ಕೃತ್ಯದ ಬಳಿಕ ಹೆದರಿದ ಮಂಜನಗೌಡ ಪಾಟೀಲ್, ದಿಕ್ಕು ತೋಚದೆ ರೇಣುಕಾಳ ಶವವನ್ನ ವರದಹಳ್ಳಿ ಬ್ರಿಡ್ಜ್ ಬಳಿ ಸುಟ್ಟುಹಾಕಲು ಯತ್ನಿಸಿದ್ದಾನೆ. ಆದರೆ ಶವವನ್ನು ಅರ್ಧಂಬರ್ದ ಸುಟ್ಟು ಅಲ್ಲಿಂದ ಆರೋಪಿ ಪರಾರಿಯಾಗಿದ್ದ. ಈ ಸಂಬಂಧ ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಪೊಲೀಸರು ತೀವ್ರ ತನಿಖೆ ಕೈಗೊಂಡಿದ್ದರು. ಇಂದು ಡಿವೈಎಸ್ ಪಿಗಳಾದ ಕುಮಾರಪ್ಪ, ನಾರಾಯಣ ಭರಮನಿ ನೇತೃತ್ವದ ತಂಡದಿಂದ ಆರೋಪಿಯನ್ನು ಬಂಧಿಸಲಾಗಿದೆ. ಅಲ್ಲದೆ ವಿಚಾರಣೆ ವೇಳೆ ತನ್ನ ಪಾಪಾ ಕೃತ್ಯವನ್ನು ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದೇ ಆಗಸ್ಟ್ 6ರಂದು ಹಾವೇರಿಯ ವಿದ್ಯಾರ್ಥಿನಿ ರೇಣುಕಾ ಪಾಟೀಲ್ ಎಂದಿನಂತೆ ಕಾಲೇಜಿಗೆ ಹೋಗಿದ್ದಳು. ಆದರೆ ಸಂಜೆಯಾದರೂ ಮನೆಗೆ ಬಂದಿರಲಿಲ್ಲ. ನಂತರ ಪೋಷಕರು ಮಗಳು ಮನೆಗೆ ಬಂದಿಲ್ಲ ಎಂದು ಎಲ್ಲಾ ಕಡೆ ಹುಡುಕಾಟ ನಡೆಸಿದ್ದರು. ಆದರೆ ಎಲ್ಲೂ ಪತ್ತೆಯಾಗಿಲ್ಲ. ಕೊನೆಗೆ ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣವನ್ನು ದಾಖಲಿಸಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿದ್ಯಾರ್ಥಿನಿಗಾಗಿ ಹುಡುಕಾಟ ನಡೆಸಿದ್ದರು. ಗುರುವಾರ ವರದಹಳ್ಳಿ ಗ್ರಾಮದ ಬಳಿಯ ಸೇತುವೆ ಬಳಿ ರೇಣುಕಾಳ ಶವ ಪತ್ತೆಯಾಗಿತ್ತು.
ಯಾರೋ ದುಷ್ಕರ್ಮಿಗಳು ರೇಣುಕಾಳನ್ನ ಹತ್ಯೆ ಮಾಡಿ ಸುಟ್ಟು ಪರಾರಿ ಆಗಿದ್ದರು. ರೇಣುಕಾಳ ಶವದ ಸ್ಥಿತಿ ನೋಡಿದರೆ ದುಷ್ಕರ್ಮಿಗಳು ಆಕೆಯ ಮೇಲೆ ಅತ್ಯಾಚಾರ ಎಸಗಿ ಆಕೆಯನ್ನ ಹತ್ಯೆ ಮಾಡಿ ಸುಟ್ಟುಹಾಕಿ ಸಾಕ್ಷ್ಯ ನಾಶ ಮಾಡಲು ಯತ್ನಿಸಿದ್ದಾರೆ ಎಂದು ಪೊಲೀಸರು ಆರಂಭದಲ್ಲೇ ಶಂಕಿಸಿದ್ದರು. ವಿಷಯ ತಿಳಿದು ಸ್ಥಳಕ್ಕೆ ಎಸ್ಪಿ ಕೆ.ಪರಶುರಾಮ, ಡಿವೈಎಸ್ಪಿ ಕುಮಾರಪ್ಪ ಹಾಗೂ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿದ ಪರಿಶೀಲನೆ ನಡೆಸಿದ್ದರು. ಜೊತೆಗೆ ಸ್ಥಳದಲ್ಲಿ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics