ಬೆಂಗಳೂರು: ಬಾಕಿ ಪಾವತಿಯಾಗದೆ ರಾಜ್ಯಾದ್ಯಂತ ಕಬ್ಬು ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಸಕ್ಕರೆ ಕಾರ್ಖಾನೆಗಳ ಇತರ ಬಾದ್ಯತೆಗಳನ್ನು ಹೊರತುಪಡಿಸಿ ಬೆಳೆಗಾರರ ಬಾಕಿ ಪಾವತಿಸುವಂತೆ ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ್ ಶೆಟ್ಟಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದಾರೆ.
ಪ್ರತಿಯೊಂದು ಕಾರ್ಖಾನೆಗಳಿಗೂ ರೈತರು ಪೂರೈಸಿರುವ ಕಬ್ಬಿನಿಂದ ಉತ್ಪತ್ತಿಯಾಗುವ ಸಕ್ಕರೆಯ ಮೇಲೆ ಮೊದಲ ಅಥವಾ ಆದ್ಯತೆಯ ಶುಲ್ಕವನ್ನು ಸೃಷ್ಟಿಸುವ ಮೂಲಕ ರೈತರ ಹಿತಾಸಕ್ತಿಯನ್ನು ರಕ್ಷಿಸಲು ಅಗತ್ಯ ಸರ್ಕಾರಿ ಆದೇಶಗಳನ್ನು ನೀಡುವಂತೆ ಅಧಿಕಾರಿಗಳು ಪರಿಶೀಲಿಸಬಹುದು ಎಂದು ಅವರು ಶಿಫಾರಸ್ಸಿನಲ್ಲಿ ತಿಳಿಸಿದ್ದಾರೆ.
ರೈತರ ಹಿತಾಸಕ್ತಿಯನ್ನು ಸಕ್ಕರೆ ಕಾರ್ಖಾನೆಗಳು ನಿರ್ಲಕ್ಷಿಸಬಾರದು. ಎಲ್ಲಾ ಕಬ್ಬು ಬೆಳೆಗಾರರ ರಕ್ಷಣೆ ನಿಟ್ಟಿನಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂಬ ಭರವಸೆ ಹೊಂದಿರುವುದಾಗಿ ಅವರು ಹೇಳಿದ್ದಾರೆ.
ಕಬ್ಬು ಬೆಳೆಗಾರರು ಬಾಕಿ ಪಾವತಿಗೆ ಬಳ್ಳಾರಿ ಜಿಲ್ಲಾಧಿಕಾರಿ ಕೂಡಲೇ ಪರಿಣಾಮ ಕ್ರಮ ಕೈಗೊಳ್ಳಲಿದ್ದಾರೆ ಎಂಬ ವಿಶ್ವಾಸದಲ್ಲಿರುವುದಾಗಿ ಅವರು ತಿಳಿಸಿದ್ದಾರೆ.
2013-14ರ ಅವಧಿಯಲ್ಲಿನ ಬಾಕಿ ಪಾವತಿಯಾಗದ ಹಿನ್ನೆಲೆಯಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯದರ್ಶಿ ಎಂ. ದೇವರಾಜ್ ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದರು. ಹೊಸಪೇಟೆಯ ಕೆಎಸ್ ಆರ್ ಸಕ್ಕರೆ ಕಾರ್ಯಾಚರಣೆ ನಿಲ್ಲಿಸಿದ್ದು, 1.6 ಕೋಟಿ ಮೊತ್ತದ ಬಾಕಿ ಇದೆ ಎಂದು ಜಿಲ್ಲಾಧಿಕಾರಿ ಡಾ. ಅಜಯ್ ನಾಗಭೂಷಣ್ ಲೋಕಾಯುಕ್ತಕ್ಕೆ ಸಲ್ಲಿಸಿರುವ ವರದಿಯಲ್ಲಿ ತಿಳಿಸಿದ್ದಾರೆ.
ಕಬ್ಬು ಬೆಳೆಗಾರರ ಬಾಕಿ ಪಾವತಿಸಲು ಸುಮಾರು 4 ಕೋಟಿ ರೂಪಾಯಿಯನ್ನು ಐಎಸ್ ಆರ್ ಸಕ್ಕರೆ ಕಾರ್ಖಾನೆ ಬಳ್ಳಾರಿ ಜಿಲ್ಲಾಧಿಕಾರಿ ಮೂಲಕ ಜಮೆ ಮಾಡಿದೆ ಎಂದು ಲೋಕಾಯುಕ್ತರು ಮಾಹಿತಿ ನೀಡಿದ್ದಾರೆ.