ರಾಜ್ಯ

ವಿಮೆ ಇಲ್ಲದ ವಾಹನ ಅಪಘಾತವಾದರೆ ವಾಹನ ಮಾಲೀಕರೇ ಪರಿಹಾರ ನೀಡಬೇಕು!

Srinivasamurthy VN
ಬೆಂಗಳೂರು: ವಿಮೆ ಇಲ್ಲದೆ ವಾಹನ ಚಲಾಯಿಸುತ್ತಿರುವ ಮಾಲೀಕರಿಗೆ ಕರ್ನಾಟಕ ಪೊಲೀಸ್ ಇಲಾಖೆ ಶಾಕ್ ನೀಡಿದ್ದು, ಇನ್ನು ಮುಂದೆ ವಿಮೆ ಇಲ್ಲದ ವಾಹನ ಅಪಘಾತಕ್ಕೀಡಾದರೆ ಸಂತ್ರಸ್ಥರಿಗೆ ವಾಹನ ಮಾಲೀಕರೇ ಪರಿಹಾರ ನೀಡಬೇಕು ಎಂದು ಹೇಳಿದೆ.
ಈ ಬಗ್ಗೆ ಕರ್ನಾಟಕ ಪೊಲೀಸ್‌ ಮಹಾ ನಿರ್ದೇಶಕರ ಕಚೇರಿ ಮಹತ್ವದ ಸುತ್ತೋಲೆ ಹೊರಡಿಸಿದ್ದು,  ವಿಮೆ ಮಾಡಿಸದ ವಾಹನ ಅಪಘಾತವಾದಾಗ ಸಂತ್ರಸ್ತರಿಗೆ ಸೂಕ್ತ ಪರಿಹಾರವನ್ನು ವಾಹನದ ಮಾಲೀಕರೇ ಭರಿಸಬೇಕು ಎಂದು ಹೇಳಿದೆ. ಆಗಸ್ಟ್ 9ರಂದೇ ಈ ಸುತ್ತೋಲೆ ಹೊರಡಿಸಲಾಗಿದ್ದು, ರಾಜ್ಯದಲ್ಲಿ ಕಟ್ಟುನಿಟ್ಟಾಗಿ ಇದನ್ನು ಪಾಲಿಸಲು ಪೊಲೀಸರಿಗೆ ಸರ್ಕಾರ ಸೂಚನೆ ನೀಡಿದೆ ಎನ್ನಲಾಗಿದೆ.
ಮೋಟಾರು ವಾಹನ ಕಾಯ್ದೆ 1988ರ ಕಲಂ 196 ಪ್ರಕಾರ ವಿಮೆ ಇಲ್ಲದ ವಾಹನಗಳು ರಸ್ತೆಯಲ್ಲಿ ಚಲಿಸುವಂತಿಲ್ಲ. ಸುಪ್ರೀಂಕೋರ್ಟ್‌ ಸಿವಿಲ್‌ ಅಪೀಲು ಪ್ರಕರಣದಲ್ಲಿ ಮೋಟಾರು ವಾಹನ ಕಾಯಿದೆ ಪ್ರಕಾರ, ಒಂದು ವೇಳೆ ಈ ರೀತಿಯ ವಿಮೆ ಮಾಡಿಸದ ವಾಹನಗಳು ರಸ್ತೆಯಲ್ಲಿ ಸಂಚರಿಸಿ ಅದರಿಂದ ಅಪಘಾತ ಉಂಟಾದಲ್ಲಿ ಹಾನಿಗೊಳಗಾದ ಸಂತ್ರಸ್ತರಿಗೆ ಸೂಕ್ತ ಪರಿಹಾರವನ್ನು ಸಂಬಂಧಪಟ್ಟ ವಾಹನದ ವಾರಸುದಾರರಿಂದ ಪಾವತಿಸುವ ಜವಾಬ್ದಾರಿ ಆಯಾ ರಾಜ್ಯ ಸರ್ಕಾರದ ಜವಾಬ್ದಾರಿ ಎಂದು 2018ರ ಮಾರ್ಚ್ 26ರ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ತಿಳಿಸಿದೆ.
ಸುಪ್ರೀಂ ಕೋರ್ಟ್‌ ನ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿರುವ ಕಾರಣ, ಎಲ್ಲ ವಾಹನ ಸವಾರರು ಕಡ್ಡಾಯವಾಗಿ ವಿಮೆ ಮಾಡಿಸಿಕೊಳ್ಳುವಂತೆ ಪೊಲೀಸ್‌ ಇಲಾಖೆಯ ಸಂಪರ್ಕ, ಲಾಜಿಸ್ಟಿಕ್ಸ್‌ ಮತ್ತು ಆಧುನೀಕರಣ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕರ ಕಚೇರಿಯಿಂದ ಹೊರಡಿಸಿರುವ ಸುತ್ತೋಲೆಯಲ್ಲಿ ಸೂಚಿಸಲಾಗಿದೆ. ಅಂತೆಯೇ ವಿಮೆ ಇಲ್ಲದೆ ವಾಹನ ಚಲಾಯಿಸುವ ಸವಾರರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿ ಪ್ರಕರಣ ದಾಖಲಿಸಬೇಕು ಎಂದು ಸರ್ಕಾರ ಪೊಲೀಸ್ ಇಲಾಖೆಗೆ ಸೂಚಿಸಿದೆ ಎನ್ನಲಾಗಿದೆ.
SCROLL FOR NEXT