ರಾಜ್ಯ

ಚೀನಾದ ಯಶಸ್ಸು ನಮಗೆ ಮಾದರಿಯಾಗಬೇಕು, ಇಸ್ರೇಲ್ ಕೃಷಿ ಯೋಜನೆ ಜಾರಿ: ಸಿಎಂ ಕುಮಾರಸ್ವಾಮಿ

Srinivas Rao BV
ಹೂಡಿಕೆಯಲ್ಲಿ ರಾಜ್ಯವೇ ನಂ.1 ಆಗಿದ್ದು, ಕರ್ನಾಟಕ ಹೂಡಿಕೆದಾರರ ನೆಚ್ಚಿನ ಹೂಡಿಕೆ ತಾಣವಾಗಿದೆ,  ಅಭಿವೃದ್ಧಿ ವಿಷಯದಲ್ಲಿ ಚೀನಾದ ಯಶಸ್ಸು ನಮಗೆ ಮಾದರಿಯಾಗಬೇಕು ಎಂದು ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. 
72 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ಮಾಡಿ ಮಾತನಾಡಿದ ಕುಮಾರಸ್ವಾಮಿ, ರಾಜ್ಯದ ಅಭಿವೃದ್ಧಿಗೆ ಇಸ್ರೇಲ್, ಚೀನಾ ಮಾದರಿಯ ಯೋಜನೆಗಳನ್ನು ಉಲ್ಲೇಖಿಸಿದ್ದಾರೆ. ರಾಜ್ಯದಲ್ಲಿ ಈ ಬಾರಿ ಉತ್ತಮ ಮಳೆಯಾಗಿದ್ದು, ನೀರಿನ ಸದ್ಬಳಕೆಗೆ ಇಸ್ರೇಲ್ ಮಾದರಿ ನೀರಾವರಿ ಯೋಜನೆಯನ್ನು ಜಾರಿಗೆ ತರಲಾಗುವುದು ಎಂದು ಹೇಳಿದ್ದಾರೆ. 
ಕೆಲವೆಡೆ ಉಂಟಾಗಿರುವ ಅತಿಯಾದ ಮಳೆಯಿಂದಾಗಿ ಸೇತುವೆಗಳು ಹಾಳಾಗಿದ್ದು, 451 ಸಂಪರ್ಕ ಸೇತುವೆ ನಿರ್ಮಿಸಲಾಗುವುದು, ಕೆಲವು ಭಾಗಗಳಲ್ಲಿ ಮಳೆ ಉತ್ತಮವಾಗಿದ್ದರೂ 13 ಜಿಲ್ಲೆಗಳಲ್ಲಿ ಬರಗಾಲ ಇದೆ ಎಂದು ಸಿಎಂ ಕುಮಾರಸ್ವಾಮಿ ತಿಳಿಸಿದ್ದಾರೆ.  ಇದೇ ವೇಳೆ ರೈತರ ಸಾಲ ಮನ್ನಾ ಬಗ್ಗೆಯೂ ಮಾತನಾಡಿರುವ ಅವರು, 49 ಸಾವಿರ ಕೋಟಿ ಸಾಲ ಮನ್ನಾಗೆ ನಿರ್ಧಾರ ಮಾಡಲಾಗಿದೆ, ಇದರಿಂದಾಗಿ ಸಹಕಾರಿ ಬ್ಯಾಂಕ್ ನಲ್ಲಿ ಸಾಲ ತೆಗೆದುಕೊಂಡಿರುವ 22 ಲಕ್ಷ ರೈತರಿಗೆ ಅನುಕೂಲವಾಗಿದ್ದು, ವಾಣಿಜ್ಯ ಬ್ಯಾಂಕ್ ಗಳಲ್ಲಿನ ರೈತರ ಸಾಲ ಮನ್ನಾಗೆ ಶೀಘ್ರವೇ ಆದೇಶ ನೀಡಲಾಗುವುದು ಎಂದು ಹೇಳಿದ್ದಾರೆ. 
ಸ್ವಾತಂತ್ರ್ಯ ದಿನಾಚರಣೆಯಂದು ಹಸಿರು ಕರ್ನಾಟಕ ಯೋಜನೆ ಜಾರಿಗೊಳಿಸಲಾಗಿದ್ದು, ಸರ್ಕಾರಿ ಜಾಗ, ಗೋಮಾಳಗಳಲ್ಲಿ ಗಿಡ ನೆಡುವ ಕಾರ್ಯಕ್ರಮ ಇಂದಿನಿಂದ ಜಾರಿ ಮಾಡಲಾಗುತ್ತದೆ ಎಂದು ಸಿಎಂ ಭಾಷಣದಲ್ಲಿ ತಿಳಿಸಿದ್ದಾರೆ.  
SCROLL FOR NEXT