ಮಡಿಕೇರಿ: ಕೊಡಗಿನಲ್ಲಿ ಧಾರಾಕಾರ ಮಳೆಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ವರದಿಗಾರ್ತಿಯೊಬ್ಬರು ನಡೆಸಿದ ಹರಸಾಹಸದ ಬಗ್ಗೆ ಅನುಭವ ಹಂಚಿಕೊಂಡಿದ್ದಾರೆ.
ಕೊಡಗಿನ ಮಕ್ಕಂದೂರಿನಲ್ಲಿ ಮಳೆ ಪೀಡಿತ ಪ್ರದೇಶಗಳ ಹಾನಿ, ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದ ನಂತರ ಜಿಲ್ಲಾ ವರದಿಗಾರ್ತಿ ಪ್ರಜ್ಞಾ ಜಿಆರ್ ಕಚೇರಿಗೆ ಬರುತ್ತಿದ್ದರು. ಆಗ ಸುಮಾರು 88 ವರ್ಷದ ವಯೋವೃದ್ಧೆ 3 ಕಿಲೋ ಮೀಟರ್ ನಷ್ಟು ದೂರ ಬೆಟ್ಟ ಪ್ರದೇಶದಲ್ಲಿ ಬರಿಗಾಲಿನಲ್ಲಿ ನಡೆದು ನಿರಾಶ್ರಿತರ ಕೇಂದ್ರದತ್ತ ಹೋಗುತ್ತಿದ್ದರು. ಭೂ ಕುಸಿತದಲ್ಲಿ ಅವರ ಮನೆ ಹಾನಿಯಾಗಿ ಹೋಗಿತ್ತು. ನಿರಾಶ್ರಿತರ ಮನೆಯಡಿ ನಿಂತು ಮಳೆಗೆ ನಡುಗುತ್ತಿದ್ದರು.
ಅವರ ಪರಿಸ್ಥಿತಿ ನೋಡಿ ವರದಿಗಾರ್ತಿ ಮಡಿಕೇರಿಯಲ್ಲಿರುವ ತಮ್ಮ ಮನೆಗೆ ಬರುವಂತೆ ಕೇಳಿಕೊಂಡರು. ಅದರಂತೆ ವೃದ್ಧೆ ಬಂದರು. ನಂತರ ಅವರ ಸಂಬಂಧಿಕರ ಮನೆಗೆ ಸ್ಥಳಾಂತರಿಸುವ ವ್ಯವಸ್ಥೆ ಮಾಡಿದರು. ನಂತರ ವರದಿಗಾರ್ತಿ ಆಫೀಸಿಗೆ ಹಿಂತಿರುಗಿದಾಗ ಕಚೇರಿಯ ಸುತ್ತ ಒಂದು ಅಡಿ ನೀರು ತುಂಬಿಕೊಂಡಿತ್ತು. ಹೇಗೋ ಕಚೇರಿಯ ಒಳ ಹೋದರು.
''ಅಗತ್ಯ ದಾಖಲೆಗಳನ್ನು ತೆಗೆಯಲೆಂದು ಅತ್ತಿದ್ದಿಂತ ಓಡಾಡುತ್ತಿದ್ದೆವು. ಆಗ ನೋಡುನೋಡುತ್ತಿದ್ದಂತೆ ಕೆಲವೇ ಕ್ಷಣಗಳಲ್ಲಿ ಕಚೇರಿಯ ಎದುರಿಗೆ ಭಾರೀ ಭೂಕುಸಿತವಾಗಿ ಟನ್ ಗಟ್ಟಲೆ ನೀರು ಹರಿಯಿತು. ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಕಚೇರಿ ಸುತ್ತಮುತ್ತ ನೀರು ತುಂಬಿ ಮೇಲೆ ಬರುತ್ತಿತ್ತು. ನಮ್ಮ ಕಚೇರಿ ನಾಯಿಯನ್ನು ಕರೆದುಕೊಂಡು ಮೇಲಿನ ಕಟ್ಟಡಕ್ಕೆ ಹೋದೆ. ಅಲ್ಲಿ ಸುಮಾರು 1 ಗಂಟೆ ಕಾದು ಕುಳಿತು ನೀರಿನ ಮಟ್ಟ ತಗ್ಗಿದ ಮೇಲೆ ಕೆಳಗಿಳಿದು ಬಂದೆವು. ಈ ಮಧ್ಯೆ ಜಿಲ್ಲಾಡಳಿತದ ತುರ್ತು ಸಂಖ್ಯೆಗೆ ನನ್ನ ತಂದೆ ಸಂಪರ್ಕಿಸಿದಾಗ ಸೂಕ್ತ ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ನಂತರ ಶಾಸಕ ಕೆಜಿ ಬೋಪಯ್ಯ ಅವರನ್ನು ಸಂಪರ್ಕಿಸಿದಾಗ ಅವರು ತಕ್ಷಣ ಎನ್ ಡಿಆರ್ ಎಫ್ ತಂಡ ನಮ್ಮನ್ನು ರಕ್ಷಿಸಲು ಕಳುಹಿಸಿದರು ಎಂದು ವಿವರಿಸಿದ್ದಾರೆ.