ಬೆಂಗಳೂರು: ಕೊಡಗಿನಲ್ಲಿ ದೊಡ್ಡ ಅನಾಹುತವಾಗಿದೆ, ಕಾಫಿ, ಅಡಕೆ, ಮೆಣಸು ಬೆಳೆ ನಷ್ಟವಾಗಿದೆ, ನಷ್ಟವಾಗಿರುವ ಸಂಬಂಧ ಇನ್ನೂ 2-3 ದಿನಗಳಲ್ಲಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ,
ಬೆಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕುಮಾರ ಸ್ವಾಮಿ, ಸುಮಾರು 200 ಎಕರೆ ಪ್ರದೇಶದಲ್ಲಿ ಭೂ ಕುಸಿತವಾಗಿದೆ, ಅಧಿಕಾರಿಗಳು 24 ಗಂಟೆ ಕೆಲಸ ಮಾಡುತ್ತಿದ್ದಾರೆ. ಕೊಡಗಿನಲ್ಲಿ ಸುಮಾರು 30 ಕಡೆ ಗಂಜಿ ಕೇಂದ್ರ ತೆರೆಯಲಾಗಿದೆ, ಎಲ್ಲಾ ಎಟಿಎಂಗಳಲ್ಲಿ ಹಣ ಸಿಗುವಂತೆ ವ್ಯವಸ್ಥೆ ಮಾಡಲಾಗಿದ್ದು, ಅಗತ್ಯ ವಸ್ತುಗಳನ್ನು ಹೆಲಿಕಾಫ್ಟರ್ ಮೂಲಕ ರವಾನಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಭದ್ರತಾ ಸಿಬ್ಬಂದಿ, ಎನ್ ಡಿ ಆರ್ ಎಫ್, ಸೇನೆ ಅಗ್ನಿ ಶಾಮಕ ದಲ, ಹೋಮ್ ಗಾರ್ಡ್, ಸೇರಿದಂತೆ 1000 ಮಂದಿ ಪರಿಹಾರ ಕಾರ್ಯಗಳಲ್ಲಿ ತೊಡಗಿದ್ದಾರೆ, 200 ಎನ್ ಸಿಸಿ ಕೆಡೆಟ್ಸ್ ಕೂಡ ಭಾಗಿಯಾಗಿದ್ದು, ಕೊಡಗಿನಲ್ಲಿ ಸುಮಾರು 50 ಜೆಸಿಬಿಗಳು ಕೆಲಸ ಮಾಡುತ್ತಿವೆ ಎಂದು ಮಾಹಿತಿ ನೀಡಿದ್ದಾರೆ.
ಜೋಡು ಪಾಳ್ಯದಲ್ಲಿ 300 ಜನರನ್ನು ರಕ್ಷಿಸಲಾಗಿದೆ, ಇದುವರೆಗೂ 2500 ಮಂದಿ ರಕ್ಷಣೆ ಮಾಡಲಾಗಿದೆ, ಕೊಡಗು ಜಿಲ್ಲೆಯಲ್ಲೇ 2060 ಮಂದಿ ಆಶ್ರಯ ಪಡೆದಿದ್ದಾರೆ,. ಪರಿಹಾರ ಕಾರ್ಯಗಳಿಗೆ ಕೈಜೋಡಿಸಲು ಹಲವು ಜಿಲ್ಲೆಗಳಿಂದ ವೈದ್ಯರು ತೆರಳಿದ್ದಾರೆ ಎಂದು ಕುಮಾರ ಸ್ವಾಮಿ ವಿವರಿಸಿದ್ದಾರೆ. ಔಷಧಿ ವೈದ್ಯರ ಕೊರತೆ ಆಗದಂತೆ ಸಿಎಸ್ ಅವರಿಗೆ ತಿಳಿಸಲಾಗಿದೆ ಎಂದು ಹೇಳಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಜಲ ಪ್ರಳಯದಿಂದಾಗಿ ಸಾವನ್ನಪ್ಪಿದವರ ಕುಟುಂಬಕ್ಕೆ 5 ಲಕ್ಷ ರು ಪರಿಹಾರವನ್ನು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ ಮಹೇಶ್ ಘೋಷಿಸಿದ್ದಾರೆ. ಭೂ ಕುಸಿತ, ಜಲಪ್ರಳಯ. ಮತ್ತಿತರ ಮಳೆ ಸಂಬಂಧಿತ ಅನಾಹುತಗಳಿಂದ ಗಾಯಗೊಂಡವರ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಅವರು ಹೇಳಿದ್ದಾರೆ.
11,421 ಮನೆಗಳಿಗೆ ಹಾನಿಯಾಗಿದೆ. 721 ಜಾನುವಾರುಗಳು ಸಾವಿಗೀಡಾಗಿವೆ. ,ಮನೆ ಕಳೆದುಕೊಂಡವರಿಗೆ 2 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.2, 50, 000 ಲೀಟರ್ ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡಲಾಗಿದೆ ಎಂದು ವಿವರ ನೀಡಿದ್ದಾರೆ.