ಕೊಡಗಿನಲ್ಲಿ ಭೂಕುಸಿತ ತೆರವು, ರಕ್ಷಣಾ ಕಾರ್ಯಾಚರಣೆ (ಸಂಗ್ರಹ ಚಿತ್ರ)
ಕೊಡಗು: ಭೀಕರ ಜಲ ಪ್ರವಾಹಕ್ಕೆ ತುತ್ತಾಗಿ, ನೀರಿನಲ್ಲಿ ಸಿಲುಕಿರುವ ಜನತೆಯ ರಕ್ಷಣಾ ಕಾರ್ಯಾಚರಣೆ ಸಮರೋಪಾದಿಯಲ್ಲಿ ಸಾಗಿದೆ. ಆದರೆ ಸೋಮವಾರಪೇಟೆಯಲ್ಲಿರುವ ಮುಕ್ಕೋಡ್ಲು ಗ್ರಾಮದಲ್ಲಿ ಸಿಲುಕಿರುವ ಇನ್ನೂ ನೂರಾರು ಜನರು ರಕ್ಷಣೆಗಾಗಿ ಕಾಯುತ್ತಿದ್ದಾರೆ.
ಕೊಡಗಿನಲ್ಲಿ ಮಳೆಯ ಪ್ರಮಾಣ ಸ್ವಲ್ಪ ಕಡಿಮೆಯಾಗಿರುವ ಬಗ್ಗೆ ವರದಿಯಾಗಿದೆ ಆದರೂ ಮುಕ್ಕೋಡ್ಲು ಗ್ರಾಮದ ಬಳಿ ಗುಡ್ಡ ಕುಸಿತದಿಂದ ಜನರು ಸಂಕಷ್ಟ ಎದುರಿಸುತ್ತಿದ್ದಾರೆ.
3 ದಿನಗಳಿಂದ ಅಪಾಯ ಎದುರಿಸುತ್ತಿರುವ ಸ್ಥಳೀಯರು ಜೀವ ಕೈಲಿ ಹಿಡಿದು ರಕ್ಷಣಾ ಕಾರ್ಯಾಚರಣೆಗಾಗಿ ಎದುರು ನೋಡುತ್ತಿದ್ದಾರೆ. ಇತ್ತ ಸೇನಾ ಸಿಬ್ಬಂದಿಗಳೂ ಸಹ ಮುಕ್ಕೋಡ್ಲು ಗ್ರಾಮದಲ್ಲಿರುವವರನ್ನು ತಲುಪಲು ಹರಸಾಹಸ ಮಾಡುತ್ತಿದ್ದು ದುರ್ಗಮ ಹಾದಿಯಲ್ಲಿ 15 ಕಿ.ಮೀ ಸಂಚರಿಸಿದ್ದರು. ಆದರೆ ಗುಡ್ಡ ಕುಸಿತದಿಂದ ಸಂಕಷ್ಟ ಎದುರಾದ ಕಾರಣ ಇನ್ನೂ ಹಲವಾರು ಸಂತ್ರಸ್ತರಲ್ಲು ತಲುಪಲು ವಿಳಂಬವಾಗಿದೆ. ಇತ್ತೀಚಿನ ವರದಿಯ ಪ್ರಕಾರ ಕಾರ್ಯಾಚರಣೆಗೆ ಅಡಚಣೆ ಉಂಟಾಗಿರುವ ಹಿನ್ನೆಲೆಯಲ್ಲಿ ಸೇನಾ ಸಿಬ್ಬಂದಿಗಳು ಮತ್ತೆ ಮಡಿಕೇರಿ ನಗರಕ್ಕೆ ಹಿಂತಿರುಗಿದ್ದಾರೆ ಎಂದು ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ.