ಬೆಂಗಳೂರು: ಪ್ರವಾಹದಿಂದ ತತ್ತರಿಸಿರುವ ಕೊಡಗು ಜಿಲ್ಲೆಯ ಸಂತ್ರಸ್ತರ ಪರಿಹಾರ ಕಾರ್ಯಕ್ಕೆ 20 ವೈದ್ಯರನ್ನೊಳಗೊಂಡ ತಂಡವನ್ನು ಕಳುಹಿಸಲು ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ಧರಿಸಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಿ. ಕೆ. ಶಿವಕುಮಾರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರೀ ಮಳೆಯಿಂದ ಕೊಡಗಿನಲ್ಲಿ ಉಂಟಾಗಿರುವ ಮಾನವೀಯ ಸಮಸ್ಯೆಯ ಕಾರಣ ಪರಿಹಾರ ಕಾರ್ಯಕ್ಕಾಗಿ 20 ವೈದ್ಯರನ್ನು ಕಳುಹಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಕೊಡಗು , ಮಲೆನಾಡು ಮತ್ತಿತರ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಸೇವೆ ಮಾಡಲು ವೈದ್ಯರು ಬೆಂಬಲ ಸೂಚಿಸಿದ್ದಾರೆ ಅಲ್ಲದೇ, ಕೊಡಗು ಪರಿಹಾರ ನಿಧಿಗೆ ಒಂದು ದಿನದ ಸಂಬಳ ನೀಡಲು ಇಲಾಖೆಯ ಸಿಬ್ಬಂದಿ ನಿರ್ಧರಿಸಿದ್ದಾರೆ ಎಂದು ಡಿ. ಕೆ. ಶಿವಕುಮಾರ್ ತಿಳಿಸಿದರು.
ಕೊಡಗು ಜಿಲ್ಲೆಯಲ್ಲಿ ವಿತರಿಸುವ ಉದ್ದೇಶದಿಂದ ಭಾರತೀಯ ವೈದ್ಯಕೀಯ ಸಂಘ 15 ಲಕ್ಷದಿಂದ 20 ಲಕ್ಷ ಮೌಲ್ಯದ ಔಷಧಿಗಳನ್ನು ಸಂಗ್ರಹಿಸಿದೆ. 175 ಶಾಖೆಯ 27 ಸಾವಿರ ಸದಸ್ಯರು ಪರಿಹಾರ ಸಾಮಾಗ್ರಿಗಳನ್ನು ಸಂಗ್ರಹಿಸುವ ಕಾರ್ಯದಲ್ಲಿ ಮುಂದಾಗಿದ್ದಾರೆ.
ಕೊಡಗಿನಲ್ಲಿ 350 ಸಂತ್ರಸ್ತರಿಗೆ ಪ್ರಥಮ ಚಿಕಿತ್ಸೆ ನೀಡಲಾಗಿದೆ . ಎಲ್ಲಾ ಶಾಖೆಗಳು ಅಗತ್ಯ ಪರಿಹಾರ ಸಾಮಾಗ್ರಿಯನ್ನು ಕೊಡುಗು ಶಾಖೆಗೆ ರವಾನಿಸುವಂತೆ ಮನವಿ ಮಾಡಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ಘಟಕದ ಅಧ್ಯಕ್ಷ ಡಾ. ಹೆಚ್. ಎನ್. ರವೀಂದ್ರ ತಿಳಿಸಿದ್ದಾರೆ.