ರಾಜ್ಯ

ನೀರಿನ ಮಟ್ಟ ತಗ್ಗುತ್ತಿದ್ದಂತೆ ಸಹಜ ಸ್ಥಿತಿಗೆ ಮರಳುತ್ತಿರುವ ಕೊಡಗು

Sumana Upadhyaya

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಪ್ರವಾಹ ಮತ್ತು ಭೂ ಕುಸಿತ ಉಂಟಾದ ನಂತರ ತೀವ್ರ ಪ್ರಾಣಹಾನಿ,  ಸಾವು, ನೋವು ಸಂಭವಿಸಿದ ನಂತರ ಇದೀಗ ಪರಿಸ್ಥಿತಿ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ.

ಕೆಲವರ ಮನೆಗಳಿಗೆ ನುಗ್ಗಿದ ನೀರು ತಗ್ಗಿದ್ದ ಕಾರಣ ಅಧಿಕಾರಿಗಳು ಸೂಚಿಸಿದರೂ ಕೂಡ ಕೆಲವರು ತಮ್ಮ ಮನೆಗಳಿಂದ ನಿರಾಶ್ರಿತ ಮನೆಗಳಿಗೆ ಹೋಗಲು ನಿರಾಕರಿಸುತ್ತಿರುವುದು ಕಂಡುಬಂತು. ಇನ್ನು ಕೆಲವರು ನಿರಾಶ್ರಿತ ಮನೆಗಳಲ್ಲಿದ್ದವರು ನಿನ್ನೆ ಸುರಕ್ಷಿತ ಪ್ರದೇಶಗಳಲ್ಲಿರುವ ತಮ್ಮ ಮನೆಗಳಿಗೆ ತೆರಳುತ್ತಿದ್ದರು.

ಪ್ರವಾಹದಲ್ಲಿ ಸಿಲುಕಿಹಾಕಿಕೊಂಡಿದ್ದ ಕೆಲವರನ್ನು ಮುಕ್ಕೋಡ್ಲು, ಕಾಲೂರು ಮತ್ತು ಮೂವತೊಕ್ಲುಗಳಿಂದ ಪಾರು ಮಾಡಲಾಗಿದೆ. ಇಲ್ಲಿ ಏಳು ಮಂದಿ ಮೃತಪಟ್ಟಿದ್ದು ಇನ್ನು ನಾಲ್ವರು ಕಣ್ಮರೆಯಾಗಿದ್ದಾರೆ. ಜಿಲ್ಲೆಯಾದ್ಯಂತ ಇಂದು ನೀರಿನ ಮಟ್ಟ ಕಡಿಮೆಯಾಗಿರುವುದರಿಂದ ಪುನರ್ವಸತಿ ಕಾರ್ಯ ನಡೆಯುತ್ತಿದೆ. ಮಡಿಕೇರಿ ಸುತ್ತಮುತ್ತ ಎಲೆಕ್ಟ್ರಿಕ್ ಪೋಲ್ ಗಳನ್ನು ಸರಿಪಡಿಸುವ ಕೆಲಸದಲ್ಲಿ ಸೆಸ್ಕಾಂ ಕಾರ್ಮಿಕರು ನಿರತರಾಗಿದ್ದಾರೆ.

ಪಾಲಿಕೆ ಕಾರ್ಮಿಕರು ಕುಶಾಲನಗರ ಸುತ್ತಮುತ್ತ ಸ್ವಚ್ಛತಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಸಣ್ಣ ನೀರಾವರಿ ಸಚಿವ ಸಿ ಎಸ್ ಪುಟ್ಟರಾಜು ನದಿ ತೀರಗಳಲ್ಲಿ ಭೂ ಕುಸಿತವಾಗುವುದನ್ನು ತಪ್ಪಿಸಲು ತಡೆಗೋಡೆಗಳನ್ನು ನಿರ್ಮಿಸಲಾಗುವುದು ಎಂದು ಹೇಳಿದ್ದಾರೆ.

ಆದರೆ ರಕ್ಷಣಾ ತಂಡದವರಿಗೆ ಕಾರ್ಯನಿರ್ವಹಣೆಗೆ ಅಡ್ಡಿಯಾಗುವುದೆಂದರೆ ಮುಟ್ಲು, ಹಮ್ಮಿಯಾಲ ಮತ್ತು ಸುರ್ಲಬ್ಬಿ ಗ್ರಾಮಗಳಲ್ಲಿನ ಜನತೆ ಸ್ಥಳ ತೊರೆದು ಹೋಗಲು ನಿರಾಕರಿಸುತ್ತಿರುವುದು. ಸೋಮವಾರಪೇಟೆ ತಾಲ್ಲೂಕಿನ ಶಾಂತಳ್ಳಿ ಗ್ರಾಮದಲ್ಲಿ ಅಪಾರ ಪ್ರಮಾಣದಲ್ಲಿ ಆಸ್ತಿಪಾಸ್ತಿ ನಷ್ಟವಾಗಿದ್ದು ಇದೀಗ ಸಹಜ ಸ್ಥಿತಿಯತ್ತ ಮರಳುತ್ತಿದೆ. ನಿನ್ನೆಯಿಂದ ಗ್ರಾಮಸ್ಥರು ತಮ್ಮ ದಿನನಿತ್ಯದ ಕೆಲಸಗಳನ್ನು ಮಾಡುತ್ತಿರುವುದು ಕಂಡುಬಂತು.

SCROLL FOR NEXT