ಬೆಂಗಳೂರು: ಭಾರೀ ಮಳೆ, ಪ್ರವಾಹದಿಂದಾಗಿ ನಲುಗಿ ಹೋಗಿರುವ ಕೊಡಗು ಸಂತ್ರಸ್ತರಿಗೆ ರಾಜ್ಯದಾದ್ಯಂತ ಪರಿಹಾರ ನಿಧಿಗಳನ್ನು ವಿತರಿಸಲಾಗುತ್ತಿದ್ದು, ಈ ನಡುವೆ ಕೆಲ ಅನಧಿಕೃತ ವ್ಯಕ್ತಿಗಳು ನಿರಾಶ್ರಿತರಿಗೆ ಪರಿಹಾರ ನೀಡುತ್ತೇವೆಂದು ಹೇಳಿಕೊಂಡು ನಕಲಿ ಬ್ಯಾಂಕ್ ಖಾತೆಗಳನ್ನು ತೆರೆದಿದ್ದು ಈ ಬಗ್ಗೆ ಸಾರ್ವಜನಿಕರು ಎಚ್ಚರದಿಂದ ಇರಬೇಕೆಂದು ಕೊಡವ ಸಮಾಜ ಬೆಂಗಳೂರು ಅಧ್ಯಕ್ಷ ಎಂ.ಎ.ರವಿ ಉತ್ತಪ್ಪ ಅವರು ಹೇಳಿದ್ದಾರೆ.
ಈ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ನಿರಾಶ್ರಿತರಿಗೆ ಸಹಾಯ ಮಾಡುವ ನೆಪದಲ್ಲಿ ಕೆಲವರು ತಮ್ಮ ವೈಯಕ್ತಿಕ ಖಾತೆಗಳ ಸಂಖ್ಯೆಗಳನ್ನು ನೀಡುತ್ತಿದ್ದು, ಈ ಮೂಲಕ ತಮ್ಮ ಖಾತೆಗೆ ಹಣ ಹಾಕಿಸಿಕೊಂಡು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಸಾರ್ವಜನಿಕರು ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಪರಿಹಾರ ನಿಧಿ ಸಂಗ್ರಹ ಹೆಸರಿನಲ್ಲಿ ಕೆಲವರು ವೈಯಕ್ತಿಕ ಖಾತೆಗೆ ಹಣ ಹಾಕಿಸಿಕೊಂಡು ದುರುಪಯೋಗಪಡಿಸಿಕೊಂಡ ಘಟನೆ ಪದ್ಮನಾಭ ನಗರದಲ್ಲಿ ನಡೆದಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗುತ್ತದೆ ಎಂದು ಹೇಳಿದ್ದಾರೆ.
ನೆರೆ ಸಂತ್ರಸ್ತರಿಗೆ ಸಹಾಯ ಮಾಡಲು ಇಚ್ಛಿಸುವವರು ಚೆಕ್ ಹಾಗೂ ಡಿಡಿಗಳನ್ನು ಕೊಡವ ಸಮಾಜದ ಪ್ರವಾಹ ಪರಿಹಾರ ನಿಧಿ (ಖಾತೆ ಸಂಖ್ಯೆ 1370101084312 ಐಎಫ್'ಸಿ ಕೋಡ್-0001370 ಕೆನರಾ ಬ್ಯಾಂಕ್, ವಸಂತನಗರ)ಗೆ ಹಾಕಬಹುದು ಎಂದು ತಿಳಿಸಿದ್ದಾರೆ.
ಪರಿಹಾರ ಸಾಮಾಗ್ರಿ ಸಂಗ್ರಹಕ್ಕೆ ಬೆಂಗಳೂರಿನ ನಾಗರೀಕರು ಉದಾರವಾಗಿ ಸ್ಪಂದಿಸಿದ್ದಾರೆ. ಸಂತ್ರಸ್ತರಿಗೆ ಪರಿಹಾರ ಸಾಮಾಗ್ರಿಗಳನ್ನು ಕೊಂಡೊಯ್ಯುತ್ತಿರುವ ಮೊಹಮ್ಮದ್ ಅನೀಸ್ ಅವರು ಮಾತನಾಡಿ, ಪರಿಹಾರ ಸಾಮಾಗ್ರಿಗಳನ್ನು ಸಂತ್ರಸ್ತರಿಗೆ ತಲುಪಿಸುವುದು ಎಷ್ಟು ಮುಖ್ಯ ಎಂಬುದು ತಿಳಿದಿದೆ. ಹೀಗಾಗಿ ನಿದ್ರೆ ಇಲ್ಲದೆ, ಗುರಿ ತಲುಪವವರೆಗೂ ವಾಹನಗಳನ್ನು ಚಾಲನೆ ಮಾಡಿದ್ದೇವೆ. ಕೊಡಗುವಿಗೆ 48 ಟ್ರಂಕ್ ಗಳು ತೆರಳಿದ್ದು, ಇದರಲ್ಲಿ ತಮ್ಮದೂ ಕೂಡ ಒಂದು ಟ್ರಕ್ ಆಗಿದೆ ಎಂದು ಹೇಳಿದ್ದಾರೆ.
ಇನ್ನು ಕೊಡವ ಸಮಾಜದ ಪ್ರವಾಹ ಪರಿಹಾರ ನಿಧಿಗೆ ಈವರೆಗೂ ರೂ.30 ಲಕ್ಷ ಜಮೆಯಾಗಿರುವುದ್ದು, ಮಸ್ಕತ್ ನಲ್ಲಿರುವ ಕೊಡವರು ರೂ.10ಲಕ್ಷ ಜಮೆ ಮಾಡಿದ್ದಾರೆಂದು ಉತ್ತಪ್ಪ ಅವರು ತಿಳಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos