ರಾಜ್ಯ

ಅನುಮಾನಗಳಿಗೆ ತೆರೆ: ಶಿರೂರು ಲಕ್ಷ್ಮೀವರತೀರ್ಥ ಸ್ವಾಮೀಜಿ ಅವರದ್ದು ಸಹಜ ಸಾವು!

Vishwanath S
ಮಂಗಳೂರು: ಅಷ್ಟಮಠಗಳಲ್ಲಿ ಒಂದಾದ ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಅವರದ್ಧು ಸಹಜ ಸಾವು ಎಂದು ಪೊಲೀಸ್ ತನಿಖೆಯಿಂದ ಸ್ಪಷ್ಟವಾಗಿದೆ. 
ಶಿರೂರು ಶ್ರೀಗಳು ಅನಾರೋಗ್ಯದಿಂದ ಸಾವನ್ನಪ್ಪಿದ್ದು ಯಾವುದೇ ವಿಷ ಪ್ರಾಶನವಾಗಿಲ್ಲ. ಸ್ವಾಮೀಜಿ ಸಾವಿನ ಕುರಿತಂತೆ ಮರಣೋತ್ತರ ಪರೀಕ್ಷೆ ಹಾಗೂ ವಿಧಿವಿಜ್ಞಾನ ವರದಿಗಳು ಪೊಲೀಸರ ಕೈ ಸೇರಿದ್ದು ಅದನ್ನು ಅನುಸರಿಸಿ ಮಣಿಪಾಲ ಕೆಎಂಸಿ ಆಸ್ಪತ್ರೆ ಅಂತಿಮ ವರದಿ ಸಲ್ಲಿಸಿದೆ. 
ಸ್ವಾಮೀಜಿ ಲಿವರ್(ಯಕೃತ್) ಸಿರೋಸಿಸ್ ಕಾಯಿಲೆ ಉಲ್ಬಣಿಸಿ ಸಾವನ್ನಪ್ಪಿದ್ದಾರೆ ಎಂದು ಅಂತಿಮ ಷರಾ ಬರೆಯಲಾಗಿದೆ. ಇದು ಎಲ್ಲ ಅನುಮಾನಗಳಿಗೆ ಅಂತ್ಯ ಹಾಡಲಿದೆ. ಇನ್ನು ಮರಣೋತ್ತರ ಪರೀಕ್ಷೆ ಬಂದಿದ್ದರೂ ಎಫ್ಎಸ್ಎಲ್ ವರದಿ ಬಳಿಕವಷ್ಟೆ ಅಂತಿಮ ತೀರ್ಮಾನ ಸಾಧ್ಯ ಎನ್ನುವುದು ಪೊಲೀಸರ ವಾದವಾಗಿತ್ತು. ವೈದ್ಯರು ಕೂಡ ಪ್ರಾಥಮಿಕ ವರದಿಯಲ್ಲಿ ಅದನ್ನೇ ಪ್ರತಿಪಾದಿಸಿದ್ದರು. 
ಇನ್ನು ಕಳೆದ ವಾರ ಬಂದಿದ್ದ ಎಫ್ಎಸ್ಎಲ್ ವರದಿ ಮತ್ತು ಮರಣೋತ್ತರ ಪರೀಕ್ಷೆ ವರದಿ ಎರಡನ್ನು ತಾಳೆ ಹಾಕಿರುವ ವೈದ್ಯರು ಸ್ವಾಮೀಜಿ ಲಿವರ್ ಸಿರೋಸಿಸ್ ಕಾಯಿಲೆಯಿಂದ ಮೃತರಾಗಿರುವುದನ್ನು ದೃಢಪಡಿಸಿದ್ದಾರೆ. ಎರಡೂ ವರದಿಗಳಲ್ಲಿ ಎಲ್ಲಿಯೂ ವಿಷ ಕುರಿತಂತೆ ಪ್ರಸ್ತಾಪವಾಗಿಲ್ಲ.
SCROLL FOR NEXT