ಬೆಂಗಳೂರು: ದಸರಾ ರಜೆ ಮುಗಿದು ಬರೀ ಒಂದು ತಿಂಗಳಾಗಿದೆ ಅಷ್ಟೆ. ನಗರದ ಹಲವು ಖಾಸಗಿ ಖಾಸಗಿ ಶಾಲೆಗಳು ಕಾನೂನು ಉಲ್ಲಂಘಿಸಿ ಪ್ರಸಕ್ತ ಶೈಕ್ಷಣಿಕ ವರ್ಷದ ಅವಧಿ ಮುಗಿಯುವ ಮುನ್ನವೇ ಮುಂದಿನ ವರ್ಷದ ಪ್ರವೇಶಾತಿ ಪ್ರಕ್ರಿಯೆ ಆರಂಭಿಸಿವೆ. ಇನ್ನು ಕೆಲವು ಶಾಲೆಗಳಲ್ಲಿ ಈಗಾಗಲೇ ಅಡ್ಮಿಷನ್ ಕ್ಲೋಸ್ ಆಗಿದೆ!
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿಗಾರರೊಬ್ಬರು ಪೋಷಕರೆಂದು ಹೇಳಿಕೊಂಡು ದಕ್ಷಿಣ ಬೆಂಗಳೂರು ಕೆಲವು ಖಾಸಗಿ ಶಾಲೆಗಳಿಗೆ ಭೇಟಿ ಕೊಟ್ಟಿದ್ದು, ಮುಂದಿನ ವರ್ಷದ ಪ್ರವೇಶಾತಿ ಪ್ರಕ್ರಿಯೆ ಮುಗಿದಿದೆ ಎಂದು ಹೇಳಿದ್ದಾರೆ.
ನೀವು ತುಂಬಾ ತಡವಾಗಿ ಬಂದಿದ್ದೀರಿ. ಪ್ರವೇಶಾತಿ ಅರ್ಜಿಗಳನ್ನು ಈಗಾಗಲೇ ನೀಡಲಾಗಿದೆ. ಶೀಘ್ರದಲ್ಲೇ ಪ್ರವೇಶಾತಿ ಪಟ್ಟಿ ಪ್ರಕಟಿಸುತ್ತೇವೆ ಎಂದು ದಕ್ಷಿಣ ಬೆಂಗಳೂರಿನ ಶಾಲೆಯೊಂದು ತಿಳಿಸಿದೆ.
ಅರ್ಜಿಗಳನ್ನು ಈಗಾಗಲೇ ವಿತರಿಸಲಾಗಿದೆ. ನೀವು ಅರ್ಜಿ ಸಲ್ಲಿಸಬಹುದು. ಆದರೆ ಅಡ್ಮಿಷನ್ ಸಿಗುತ್ತೆ ಅಂತ ಖಚಿತವಾಗಿ ಹೇಳುವುದಿಲ್ಲ. ಯಾರಾದರೂ ಬಿಟ್ಟುಕೊಟ್ಟರೆ ಮಾತ್ರ ನಿಮಗೆ ಅಡ್ಮಿಷನ್ ಸಿಗುತ್ತೆ ಎಂದು ಮತ್ತೊಂದು ಶಾಲೆಯ ಸಿಬ್ಬಂದಿ ತಿಳಿಸಿದ್ದಾರೆ.
'ನಾನು ನನ್ನ ಮಗನ ಅಡ್ಮಿಷನ್ ಗಾಗಿ ಅಕ್ಟೋಬರ್ ಮಧ್ಯೆದಲ್ಲಿ ನಮ್ಮ ಪ್ರದೇಶದ ಕೆಲವು ಶಾಲೆಗಳಿಗೆ ಭೇಟಿ ನೀಡಿದ್ದೆ. ಆದರೆ ಅವರು ನೀವು ತುಂಬಾ ತಡವಾಗಿ ಬಂದಿದ್ದೀರಿ. ಅಡ್ಮಿಷನ್ ಪ್ರಕ್ರಿಯೆ ಮುಗಿದೆ ಎಂದು ಹೇಳಿದಾಗ ನನಗೆ ಶಾಕ್ ಆಯ್ತು' ಎಂದು ಶಿಲ್ಪಾ ಪ್ರಶಾಂತ್ ಎಂಬುವವರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಕರ್ನಾಟಕ ಶಿಕ್ಷಣ ಕಾಯ್ದೆ ಹಾಗೂ ಕರ್ನಾಟಕ ಶೈಕ್ಷಣಿಕ ಸಂಸ್ಥೆ ತಿದ್ದುಪಡಿ ಕಾಯ್ದೆ 2018ರ ಪ್ರಕಾರ ಶೈಕ್ಷಣಿಕ ಅವಧಿ ಮುಗಿಯುವ ಮುನ್ನ ಸರ್ಕಾರಿ, ಖಾಸಗಿ, ಅನುದಾನ ಹಾಗೂ ಅನುದಾನ ರಹಿತ ಖಾಸಗಿ ಶಾಲೆಗಳು ಸೇರಿದಂತೆ ಯಾವುದೇ ಶಾಲೆಗಳು ಪ್ರವೇಶ ಪ್ರಕ್ರಿಯೆಯನ್ನು ಆರಂಭಿಸುವಂತಿಲ್ಲ. ವಿದ್ಯಾರ್ಥಿಗಳ ಪರೀಕ್ಷಾ ಅವಧಿ ಅಂದರೆ ಮಾರ್ಚ್, ಏಪ್ರಿಲ್ ತಿಂಗಳು ಮುಗಿದ ನಂತರವೇ ಬೇಸಿಗೆ ರಜೆಯ ಸಮಯವಾದ ಏಪ್ರಿಲ್- ಮೇ ತಿಂಗಳ ಮಧ್ಯಭಾಗದಲ್ಲಿ ಪ್ರವೇಶಾತಿಯನ್ನು ನಡೆಸಬೇಕೆಂಬ ನಿಯಮವಿದೆ. ಒಂದು ವೇಳೆ ಯಾರಾದರೂ ಮಧ್ಯ ಅವಧಿಯಲ್ಲಿ ಪ್ರವೇಶ ಮಾಡಿಕೊಂಡಿರುವುದು ಕಂಡುಬಂದರೆ ಅಂಥ ಶಾಲೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವುದು ಅಂದರೆ ದಂಡ ಇಲ್ಲವೇ ಶಾಲಾ ಮಾನ್ಯತೆಯನ್ನೇ ರದ್ದುಪಡಿಸಬೇಕೆಂಬ ನಿಯಮ ಕಾಯ್ದೆಯಲ್ಲಿದೆ.
ಆದರೆ ಕಾಯ್ದೆ ಕೇವಲ ಕಾಗದಕ್ಕೆ ಸೀಮಿತವಾಗಿದೆ ಹೊರತು ಈವರೆಗೂ ಯಾವುದೇ ಶಾಲೆಗಳ ವಿರುದ್ಧ ಸರ್ಕಾರವಾಗಲೀ, ಸಾರ್ವಜನಿಕ ಶಿಕ್ಷಣ ಇಲಾಖೆಯಾಗಲಿ ಒಂದೇ ಒಂದು ಕ್ರಮವನ್ನು ಜರುಗಿಸಿರುವ ನಿದರ್ಶನಗಳಿಲ್ಲ. ಕಾಯ್ದೆ ಕೇವಲ ಕಾಗದದ ಮೇಲಿನ ಹುಲಿಯಂತಾಗಿದ್ದು, ಖಾಸಗಿ ಶಾಲೆಗಳು ಯಾರ ನಿಯಂತ್ರಣಕ್ಕೂ ಸಿಗದೆ ಸರ್ಕಾರವನ್ನೇ ಅಲುಗಾಡಿಸುವಂತಹ ಮಟ್ಟಕ್ಕೆ ಬೆಳೆದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics