ಬೀದರ್: ವಾಕಿಂಗ್ ಬಂದಿದ್ದ ಇಬ್ಬರು ಮಹಿಳೆಯರನ್ನು ಮಾನಸಿಕ ಅಸ್ವಸ್ಥನೊಬ್ಬ ಭೀಕರ ಕೊಲೆ ಮಾಡಿರುವ ಘಟನೆ ಬೀದರ್ ಜನವಾಡಾ ರಸ್ತೆಯ ಲೇಬರ್ ಕಾಲೋನಿಯಲ್ಲಿ ನಡೆದಿದೆ.
ಲೇಬರ್ ಕಾಲೋನಿಯವರಾದ ಲಲಿತಮ್ಮ (60) ಹಾಗೂ ದುರ್ಗಮ್ಮ (50) ಹತ್ಯೆಗೀಡಾದ ದುರ್ದೈವಿಗಳು.
ಭಾನುವಾರ ಬೆಳಿಗ್ಗೆ ಎಂದಿನಂತೆ ವಾಯು ವಿಹಾರಕ್ಕೆಂದು ವಾಕಿಂಗ್ ಬಂದಿದ್ದ ವೇಳೆ ಹನುಮಾನ್ ದೇವಸ್ಥಾನದ ಬಳಿ ನಿಂತಿದ್ದ ಮಾನಸಿಕ ಸ್ವಸ್ಥನೊಬ್ಬ ದೇವಸ್ಥಾನದೊಳಗೆ ಕಲ್ಲು ಎಸೆಯುತ್ತಿದ್ದ. ಇದಕ್ಕೆ ಆಕ್ಷೇಪಿಸಿದ ಮಹಿಳೆಯರು ಆತನಿಗೆ ಕಲ್ಲು ಎಸೆಯದಂತೆ ಹೇಳಿದ್ದಾರೆ.
ಇದರಿಂದ ಕೋಪಗೊಂಡ ಆತ ದೇವಸ್ಥಾನದ ಆವರಣದಲ್ಲಿ ತಂದು ಹಾಕಲಾಗಿದ್ದ ಕಟ್ಟಿಗೆ ತೆಗೆದುಕೊಂಡು ಲಲಿತಮ್ಮನಿಗೆ ಮನಸೋ ಇಚ್ಚೆ ಹೊಡೆದಿದ್ದಾನೆ.ಇಂದು ಬೆಳಗಿನ ಜಾವ ಸುಮಾರು 4 ಗಂಟೆ ಹೊತ್ತಿಗೆ ಈ ಘಟನೆ ನಡೆದಿದೆ.ಲಲಿತಮ್ಮನನ್ನು ಹೊಡೆತದಿಂದ ಬಿಡಿಸಲು ಮುಂದಾದಾಗ ದುರ್ಗಮ್ಮನಿಗೆ ಸಹ ಏಟುಗಳು ಬಿದ್ದಿದೆ. ಇದರಿಂದ ಇಬ್ಬರೂ ಮಹಿಳೆಯರು ಸಾವನ್ನಪ್ಪಿದ್ದಾರೆ.
ಘಟನಾ ಸ್ಥಳಕ್ಕೆ ಲಲಿತಮ್ಮನ ಮಗ ಹಾಗೂ ಇನ್ನೊಬ್ಬ ವ್ಯಕ್ತಿ ಬಂದಿದ್ದಾಗಲೂ ಅವರಿಗೆ ಸಹ ಆ ವ್ಯಕ್ತಿ ಹೊಡೆಯಲು ಮುಂದಾಗಿದ್ದಾನೆ. ಆಗ ಅವರು ಅರಚಾಡಲು ಪ್ರಾರಂಭಿಸಿದ ಬಳಿಕ ಬಿಟ್ಟಿದ್ದಾನೆ.
ಘಟನೆ ಸಂಬಂಧ ಯಾದಗಿರಿ ಜಿಲ್ಲೆ ಶಹಾಪುರ ತಾಲೂಕು ವಡಗೇರಾ ಗ್ರಾಮದ ದೇವೀಂದ್ರಪ್ಪ ಎಂಬಾತನನ್ನು ಪೋಲೀಸರು ಬಂಧಿಸಿದ್ದಾರೆ.
ಘಟನೆಯಿಂದ ಕಾಲೋನಿಯ ಜನರಲ್ಲಿ ಭೀತಿ, ಆತಂಕ ಮನೆಮಾಡಿದೆ. ಮೃತ ಮಹಿಳೆಯರಾದ ಲಲಿತಮ್ಮ ಹಾಗೂ ದುರ್ಗಮ್ಮನವರ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ.
ಪ್ರಕರಣ ಸಂಬಂಧ ಮಾರ್ಕೆಟ್ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಕೊಲೆಗೆ ನಿಖರ ಕಾರಣ ಇನ್ನಷ್ಟೇ ತಿಳಿಯಬೇಕಿದೆ.