ರಾಜ್ಯ

ಹೆತ್ತ ತಾಯಿಗೆ ಪೊರಕೆಯಲ್ಲಿ ಹೊಡೆದ ಮಗನಿಗೆ 'ಪಾಠ' ಕಲಿಸಲು ಡಿಸಿಪಿ ಅಣ್ಣಾಮಲೈ ಮುಂದು!

Raghavendra Adiga
ಬೆಂಗಳೂರು: ಬುದ್ದಿವಾದ ಹೇಳಿದ್ದಕ್ಕಾಗಿ ಮಗನೊಬ್ಬ ಹೆತ್ತ ತಾಯಿಯನ್ನು ಪೊರಕೆಯಿಂದ ಹೊಡೆದ ಪ್ರಕರಣಕ್ಕೆ ಇದೀಗ ಮಹತ್ವದ ತಿರುವು ಸಿಕ್ಕಿದೆ. ನಗರದ ಡಿಸಿಪಿ ಅಣ್ಣಾಮಲೈ ತಾವು ಈ ಪ್ರಕರಣದಲ್ಲಿ ಕಾನೂನು ಪ್ರಕಾರ ಕ್ರಮ ಜರುಗಿಸುತ್ತೇನೆ ಎಂದಿದ್ದಾರೆ.
ತಾಯಿ ಬುದ್ದಿವಾದ ಹೇಳಿದ್ದಕ್ಕೆ ಜೀವನ್ ಎಂಬಾತ ತಾಯಿಗೆ ಪೊರಕೆಯಿಂದ ಹೊಡೆದುದಲ್ಲದೆ "ನನ್ನ ವಿಚಾರ ಹೊರಗೆ ಏನಾದರೂ ಮಾತನಾಡಿದರೆ ಇದೇ ರೀತಿಯಾಗಿ ಟ್ರೀಟ್ ಮೆಂಟ್ ನೀಡುತ್ತೇನೆ" ಎಂದು ಬೆದರಿಕೆ ಹಾಕಿದ್ದ ಘಟನೆ ಬೆಂಗಳೂರಿನ ಜೆಪಿ ನಗರ ವ್ಯಾಪ್ತಿಯಲ್ಲಿ ನಡೆದಿತ್ತು. 
ಇಂದು ಬೆಳಿಗ್ಗೆ ಈ ಘಟನೆ ವೀಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದ್ದು ಮಗನ ಮುಂದೆ ತಾಯಿ ಕೈಮುಗಿದು ನಿಂತರೂ ಕರುಣೆ ಇಲ್ಲದ ಮಗ ಅಸಭ್ಯವಾಗಿ ವರ್ತಿಸಿದ್ದ ದೃಶ್ಯಗಳು ವ್ಯಾಪಕ ಟೀಕೆಗೆ ಗುರಿಯಾಗಿದ್ದವು.
ಈ ಸಂಬಂಧ ಜೀವನ್ ತಾಯಿ ತನ್ನ ಮಗನಿಗೆ ಬುದ್ದಿ ಹೇಳುವಂತೆ ಪೋಲೀಸರಿಗೆ ಮನವಿ ಮಾಡಿದ್ದರೆನ್ನಲಾಗಿದೆ. 
ಇದೀಗ ಘಟನೆ ಕುರಿತು ಖಾಸಗಿ ಸುದ್ದಿವಾಹಿನಿಯೊಂದರ ಜತೆ ಮಾತನಾಡಿದ ಅಣ್ಣಾಮಲೈ ಪೊಲೀಸರು ಈ ಸಂಬಂಧ ಸುಮೋಟೋ ಪ್ರಕರಣ ದಾಖಲಿಸಿ ಕಾನೂನಿನಂತೆ ಕ್ರಮ ಜರುಗಿಸುತ್ತೇವೆ ಎಂದಿದ್ದಾರೆ.
ಜತೆಯಲ್ಲಿ ಜೀವನ್ ವಿರುದ್ಧ ಅವನ ತಾಯಿ ಯಾವ ದೂರನ್ನೂ ನೀಡಿಲ್ಲ, ಸಂಬಂಧಿಕರು ಸಹ ಈ ಕುರಿತು ಪ್ರಕರಣ ದಾಖಲಿಸಿಲ್ಲ. ನಾವು ಜೀವನ್ ತಾಯಿಬಳಿ ಮಾತನಾಡಿ ಅವರಿಗೆ ಹಲ್ಲೆಯಿಂದ ಗಾಯವಾಗಿದೆಯೇ ಎನ್ನುವುದನ್ನು ಪತ್ತೆ ಮಾಡಿ ಸ್ವಯಂ ದೂರು ದಾಖಲಿಸಿಕೊಳ್ಳುತ್ತೇವೆ ಎಂದು ಅವರು ಹೇಳಿದ್ದಾರೆ.
SCROLL FOR NEXT