ಬೆಂಗಳೂರು: ಅಧಿಕಾರಕ್ಕೆ ಬಂದು 6 ತಿಂಗಳುಗಳು ಕಳೆದರೂ ಈಗಲೂ ಅಸ್ಥಿರತೆಯ ಆತಂಕದಲ್ಲಿಯೇ ಸರ್ಕಾರವನ್ನು ಮುನ್ನಡೆಸುತ್ತಿರುವ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಬೆಳಗಾವಿ ಅಧಿವೇಶನ ಸವಾಲಾಗಿ ಪರಿಣಮಿಸಿದ್ದು, ರೈತರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಆಡಳಿತಾರೂಢ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಬಿಜೆಪಿ ಸಕಲ ಸಿದ್ಧತೆಗಳನ್ನು ನಡೆಸಿದೆ.
ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ ನಾಳೆಯಿಂದ ಆರಂಭವಾಗಲಿದ್ದು, ಕಳೆದ 6 ತಿಂಗಳಿಂದ ಅಸ್ಥಿರತೆಯ ಭೀತಿಯಲ್ಲಿ ಹೆಜ್ಜೆ ಹಾಕುತ್ತಿರುವ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಒಂದು ಕಡೆ ಮಿತ್ರ ಪಕ್ಷ ಕಾಂಗ್ರೆಸ್ಸಿನ ಶಾಸಕರಲ್ಲಿ ಮೂಡಿರುವ ಅಸಮಾಧಾನ, ಅತೃಪ್ತಿ, ಸಚಿವರಲ್ಲಿನ ಭಿನ್ನಮತ, ಗುಂಪುಗಾರಿಕೆ ಸಮಸ್ಯೆ ನಿಭಾಯಿಸಬೇಕಾಗಿದೆ.
ಮತ್ತೊಂದು ಕಡೆ ಬಲಿಷ್ಠವಾಗಿರುವ ಬಿಜೆಪಿ, ಸಾಲ ಮನ್ನಾ, ಬರಿ ಪರಿಹಾರ, ಕಬ್ಬಿನ ಬಾಕಿ, ರೈತರ ವಿವಿಧ ಸಮಸ್ಯೆ ಮುಂತಾದ ಅಂಶಗಳನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಸಿದ್ಧವಾಗಿ ನಿಂತಿದೆ.
ಇದೇ ವೇಳೆ ಅಧಿವೇಶನದ ಮೊದಲ ದಿನವೇ ಬೆಳಗಾವಿಯಲ್ಲಿ ಬಿಜೆಪಿ ರೈತರ ಸಮಸ್ಯೆ ಮುಂದಿಟ್ಟುಕೊಂಡು ಬೃಹತ್ ರ್ಯಾಲಿ ನಡೆಸಲು ಸಜ್ಜಾಗಿದೆ. ವಿವಿಧ ರೈತರ ಸಂಘಟನೆಗಳು ಸರಣಿ ಹೋರಾಟ, ಪ್ರತಿಭಟನೆ ಮಾಡಲು ಮುಂದಾಗಿವೆ. ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ರೈತರ ಸಾಲಮನ್ನಾ ಇನ್ನೂ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬಂದಿಲ್ಲ.
ಬೆಳಗಾವಿಯ ಸುವರ್ಣಸೌಧದಲ್ಲಿ ಡಿ.10ರಿಂದ ಡಿ.21ರವರೆಗೆ ಚಳಿಗಾಲದ ಅಧಿವೇಶನ ನಡೆಯಲಿದ್ದು, ಅಧಿವೇಶನದ ವೇಳೆ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಬಿಗಿ ಭದ್ರತೆಯನ್ನು ನಿಯೋಜಿಸಲಾಗಿದೆ.
ಅಧಿವೇಶನ ಸಂದರ್ಭದಲ್ಲಿ ಬಂದೋಬಸ್ತ್ ಗಾಗಿ ಓರ್ವ ಪೊಲೀಸ್ ಆಯುಕ್ತ, 7 ಪೊಲೀಸ್ ವರಿಷ್ಠಾಧಿಕಾರಿ, 11 ಹೆಚ್ಚುವರಿ ಎಸ್ಪಿ, 44 ಎಸ್'ಪಿ ಹಾಗೂ ಡಿಎಸ್'ಪಿ, 81 ಇನ್ಸ್ ಪೆಕ್ಟರ್ ಸೇರಿದಂತೆ ಒಟ್ಟು 4874 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics