ಗ್ರಾಮ ಪಂಚಾಯತಿ ಅಧ್ಯಕ್ಷನಿಂದ ಸದಸ್ಯನ ಕಗ್ಗೊಲೆ!
ಬೆಳಗಾವಿ: ರಾಜಕೀಯ ಒಳಜಗಳವೊಂದು ಪಂಚಾಯತಿ ಸದಸ್ಯನೊಬ್ಬನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಪಂಚಾಯತಿಯಲ್ಲಿ ಅವಿಶ್ವಾಸ ನಿರ್ಣಯ ಮಂಡನೆ ಮಾಡಿದನೆನ್ನುವ ಕಾರಣಕ್ಕೆ ಪಂಚಾಯತಿ ಅಧ್ಯಕ್ಷನೊಬ್ಬ ಗ್ರಾಮ ಪಂಚಾಯತಿ ಸದಸ್ಯನನ್ನೇ ಹತ್ಯೆ ಮಾಡಿದ್ದಾನೆ.ಬೆಳಗಾವಿಯ ಹೊಸ ವಂಟಮೂರಿ ಗ್ರಾಮದಲ್ಲಿ ನಡೆದಿರುವ ಘಟನೆಯಲ್ಲಿ ಪಂಚಾಯತ್ ಸದಸ್ಯ ಬನ್ನೆಪ್ಪ ಪಾಟೀಲ್ (40) ಎಂಬಾತ ಹತ್ಯೆಗೀಡಾಗಿದ್ದಾನೆ.
ಗುರುವಾರ ಮಧ್ಯರಾತ್ರಿ ಸಂಭವಿಸಿದ ಘಟನೆಯಲ್ಲಿ ಗಾಮ ಪಂಚಾಯತಿ ಅಧ್ಯಕ್ಷ ಶಿವಾಜಿ ವಣ್ಣೂರ ಎಂಬಾತನೇ ಪಾಟೀಲ್ ನನ್ನು ಕೊಲೆ ಮಾಡಿದ್ದಾನೆ.
ಹೊಸ ವಂಟಮೂರಿ ಗ್ರಾಮ ಪ್ಂಚಾಯತಿ ಅಧ್ಯಕ್ಷರಾಗಿದ್ದ ಶಿವಾಜಿ ವಣ್ಣೂರ ಅವರ ಕಾರ್ಯವೈಖರಿ ಸರಿಯಿರದ ಕಾರಣ ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದರು.ಅಲ್ಲದೆ ಕೆಲ ದಿನಗಳಹಿಂದೆ ಅಧ್ಯಕ್ಷರ ವಿರುದ್ಧ ಗ್ರಾಮ ಪಂಚಾಯತಿಯ ಕೆಲ ಸದಸ್ಯರ ಗುಂಪು ಅವಿಶ್ವಾಸ ನಿಉರ್ಣಯ ಮಂಡನೆಗೆ ಯತ್ನ ನಡೆಸಿದೆ. ಆದರೆ ಅದು ಸಫಲವಾಗಿರಲಿಲ್ಲ. ಆಗ ಹತ್ಯೆಯಾದ ಬನ್ನೆಪ್ಪ ಪಾಟೀಲ್ ನೇತೃತ್ವದಲ್ಲಿ ಡಿಸೆಂಬರ್ 7ರಂದು ಇನ್ನೊಮ್ಮೆ ಅವಿಶ್ವಾಸ ನಿರ್ಣಯಕ್ಕೆ ಮುಂದಾಗಿದ್ದಾರೆ.ಇದು ಅಧ್ಯಕ್ಷ ಶಿವಾಜಿ ವಣ್ಣೂರ ಅವರಲ್ಲಿ ಕೋಪ ತರಿಸಿತ್ತು.
ನಿನ್ನೆ ರಾತ್ರಿ ಸುಮಾರು ಒಂಬತ್ತು ಗಂಟೆಗೆ ಶಿವಾಜಿ ವಣ್ಣೂರ ಹಾಗೂ ಅವರ ಬೆಂಬಲಿಗರು ಬನ್ನೆಪ್ಪ ಪಾಟೀಲ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಅಮಾನುಷವಾಗಿ ಕೊಂದು ಹಾಕಿದ್ದಾರೆ.
ಇಷ್ಟಲ್ಲದೆ ಗ್ರಾಮ ಪಂಚಾಯತಿಯಲ್ಲಿ ನಡೆದ ಬೆಳವಣಿಗೆ ವಿರುದ್ದ್ಧ ಅಧ್ಯಕ್ಷ ಶಿವಾಜಿ ವಣ್ಣೂರ ಹೈಕೋರ್ಟ್ ಮೊರೆ ಹೋಗಿದ್ದರೆನ್ನಲಾಗಿದ್ದು ಕೋರ್ಟ್ ತೀರ್ಪು ಬರುವ ಮುನ್ನವೇ ಈ ಪ್ರಕರಣ ನಡೆದಿದೆ.
ಹತ್ಯೆಯಾಗಿರುವ ಬನ್ನೆಪ್ಪ ಪಾಟೀಲ್ ಹಾಗೂ ಪತ್ನಿ ಸವಿತಾ ಪಾಟೀಲ್ ಇಬ್ಬರೂ ಗ್ರಾಮ ಪಂಚಾಯತಿಯ ಸದಸ್ಯರಾಗಿದ್ದಾರೆ.
ಘಟನೆ ಕುರಿತಂತೆ ಕಾಕಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದುವರೆಗೆ 8 ಜನರನ್ನು ವಶಕ್ಕೆಪಡೆದಿರುವ ಪೋಲೀಸರು ತನಿಖೆ ಮುಂದುವರಿಸಿದ್ದಾರೆ.