ಬೆಳಗಾವಿ: ಕರ್ನಾಟಕದ ಬೆಳಗಾವಿ ಹಾಗೂ ಯರಗಟ್ಟಿ ನಡುವಿನ ರಸ್ತೆಯು ದೇಶದ ಮೊದಲ ಅಪಘಾತ ನಿಯಂತ್ರಕ ಮಾದರಿ ರಸ್ತೆ ಎನಿಸಿದ್ದು ಇದಕ್ಕೆ ವಿಶ್ವ ಬ್ಯಾಂಕ್ ಶ್ರೇಷ್ಠ ರ್ಯಾಂಕ್ ನೀಡಿ ಅಭಿನಂದಿಸಿದೆ.
ಇತ್ತೀಚೆಗಷ್ಟೇ ಮೇಲ್ದರ್ಜೆಗೇರಿಸಲ್ಪಟ್ಟಿದ್ದ ಈ ರಸ್ತೆ 62 ಕಿಮೀ ಇದ್ದು ದೇಶದ ಸ್ಪೆಷಲ್ ಕ್ಯಾರಿಯರ್ ಡೆಮಾನ್‌ಸ್ಪ್ರೇಶನ್ ಪ್ರೋಗ್ರಾಂ ಮಾದರಿ ರಸ್ತೆಯಾಗಿ ಗುರುತಿಸಲ್ಪಟ್ಟಿದೆ. 2016ರಲ್ಲಿ ಈ ರಸ್ತೆ ಕಾಮಗಾರಿ ಪ್ರಾರಂಭವಾಗಿದ್ದು ಒಂದೂವರೆ ವರ್ಷಗಳಲ್ಲಿ ಪೂರ್ಣವಾಗಿ ಇದೇ ಜುಲೈನಲ್ಲಿ ಉದ್ಘಾಟನೆಗೊಂಡಿತ್ತು.
ರಸ್ತೆ ಅಪಘಾತವನ್ನು ತಗ್ಗಿಸುವ ನಿಟ್ಟಿನಲ್ಲಿ ರೂಪಿಸಲಾಗಿರುವ ಎಸ್‌ಸಿಡಿಪಿ ಯೋಜನೆಯಡಿಯಲ್ಲಿ ಬೆಳಗಾವಿ-ಯರಗಟ್ಟಿ ನಡುವಿನ ರಸ್ತೆ ಗುರುತಿಸಲಾಗಿದ್ದು ಈ ರಸ್ತೆಯಲ್ಲಿ ಒಟ್ಟು 45 ಜಂಕ್ಷನ್ ಗಳಿದೆ.ಈ ರಸ್ತೆಯಲ್ಲಿ ಅತ್ಯಧಿಕ ಅಪ್ಘಾತಗಳು ಸಂಭವಿಸುತ್ತಿದ್ದ ಕಾರಣ ರಾಜ್ಯ ಹೆದ್ದಾರಿ ಪ್ರಾಧಿಕಾರ ಹಾಗೂ ವಿಶ್ವ ಬ್ಯಾಂಕ್ ಒಟ್ಟಾಗಿ 29 ಕೋಟಿ ವೆಚ್ಚದಲ್ಲಿ ಯೋಜನೆ ಕೈಗೆತ್ತಿಕೊಂಡು ಮಾದರಿ ರಸ್ತೆ ರೂಪಿಸಿದೆ. ರಸ್ತೆಯಲ್ಲಿ 12 ಟ್ರಾಫಿಕ್ ಸಿಗ್ನಲ್ ಅಳವಡಿಸಲಾಗಿದ್ದು 36 ಹಂಪ್ಸ್ ಗಳನ್ನು ತೆರವುಗೊಳಿಸಲಾಗಿದೆ. ಅಲ್ಲದೆ ಜಂಕ್ಷನ್ ಗಳ ಆಕಾರವನ್ನು "ವೈ" ನಿಂದ "ಟಿ" ಆಗಿ ಮಾರ್ಪಡಿಸ;ಲಾಗಿದೆ. ರಸ್ತೆಯಲ್ಲಿ ಭಾರೀ ವಾಹನ ಚಾಲನೆಗೆ ಅನುಕೂಲವಾಗುವಂತೆ ಟ್ರಕ್ ಹಾಗೂ ಬಸ್ ಬೇ ಗಳನ್ನೂ ನಿರ್ಮಿಸಲಾಗಿದೆ.
ಯೋಜನೆ ಕುರಿತಂತೆ ಮೆಚ್ಚುಗೆ ಸೂಚಿಸಿರುವ ವಿಶ್ವಬ್ಯಾಂಕ್ ದೇಶದ ಇತರೆ ರಾಜ್ಯಗಳೂ ಸಹ ಇದೇ ಮಾದರಿಯನ್ನು ಅನುಸರಿಸುವಂತೆ ಹೇಳಿದೆ.
ಈ ಮಾದರಿ ರಸ್ತೆ ವ್ಯಾಪ್ತಿಯಲ್ಲಿ ರಸ್ತೆ ನಿಯಮಾವಳಿ ಕುರುತು ಜಾಗೃತಿ ಮೂಡಿಸುವ ಸಲುವಾಗಿ ಆರ್‌ಟಿಒ, ಪಿಡಬ್ಲ್ಯೂಡಿ, ಶಿಕ್ಷಣ ಮತ್ತು ಆರೋಗ್ಯ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಒಂದು ತಿಂಗಳ ಕಾಲ ಕಾರ್ಯಕ್ರಮ ಆಯೋಜನೆ ಮಾಡಿದ್ದು ಶುಕ್ರವಾರ ಬೆಳಗಾವಿಯ ಪೊಲೀಸ್ ಪರೇಡ್ ಮೈದಾನದಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಇದಕ್ಕೆ ಚಾಲನೆ ನೀಡುವರು.