ಮೈಸೂರು: ವಿಷ ಪ್ರಸಾದ ದುರಂತ ಪ್ರಕರಣ: ಆರೋಗ್ಯ ಸಚಿವರ 'ಉಡಾಫೆ' ಸಮರ್ಥನೆ
ಚಾಮರಾಜನಗರ ಜಿಲ್ಲೆ ಸುಳ್ವಾಡಿ ಗ್ರಾಮದಲ್ಲಿ ಮಾರಮ್ಮ ದೇವಾಲಯದ ಪ್ರಸಾದ ದುರಂತ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದರೂ ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಅವರಿಗೆ ಗೊತ್ತೇ ಇರಲಿಲ್ಲವಂತೆ. ನಿನ್ನೆ ಸಂಜೆ ಗೊತ್ತಾಯಿತ್ತಂತೆ.
ಮೈಸೂರು: ಚಾಮರಾಜನಗರ ಜಿಲ್ಲೆ ಸುಳ್ವಾಡಿ ಗ್ರಾಮದಲ್ಲಿ ಮಾರಮ್ಮ ದೇವಾಲಯದ ಪ್ರಸಾದ ದುರಂತ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದರೂ ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಅವರಿಗೆ ಗೊತ್ತೇ ಇರಲಿಲ್ಲವಂತೆ. ನಿನ್ನೆ ಸಂಜೆ ಗೊತ್ತಾಯಿತ್ತಂತೆ.
ಘಟನೆ ಸಂಭವಿಸಿ 44 ಗಂಟೆಗಳ ಬಳಿಕ ಮೈಸೂರಿನಲ್ಲಿ ಇಂದು ಪ್ರತ್ಯಕ್ಷಗೊಂಡ ಸಚಿವ ಶಿವಾನಂದ ಪಾಟೀಲ್ , ವಿಜಯಪುರದಿಂದ ಬರುವುದಕ್ಕೆ ತಡವಾಯಿತು ಎಂದು ಹೇಳುವ ಮೂಲಕ ತಮ್ಮ ಕರ್ತವ್ಯನಿಷ್ಠೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಬಂದ ನಂತರ ನಾನೇಕೆ ಎಂದು ಹೇಳಿಕೊಂಡು ವಿಜಯಪುರದಲ್ಲಿಯೇ ಇದ್ದಾರಂತೆ. ಹೀಗಂತಾ ಅವರೇ ಹೇಳಿದ್ದಾರೆ. ಸಿಎಂ ಕುಮಾರಸ್ವಾಮಿ ಅವರೇ ಬಂದು ಹೋಗಿದ್ದಾರೆ. ನಾನು ಬಂದು ಇನ್ನೇನು ಆಗಬೇಕು ಅಂತಾ ಬರಲಿಲ್ಲ ಎಂದು ಉಡಾಫೆಯ ಮಾತುಗಳನ್ನಾಡಿದ್ದಾರೆ.
ಮೃತಪಟ್ಟ ಕುಟುಂಬ ಸದಸ್ಯರಿಗೆ ಸರ್ಕಾರದಿಂದ 5 ಲಕ್ಷ ಹಾಗೂ ಕೆಪಿಸಿಸಿ ವತಿಯಿಂದ 1 ಲಕ್ಷ ರೂಪಾಯಿ ಪರಿಹಾರ ನೀಡಲಾಗಿದ್ದು, ಹೆಚ್ಚಿನ ಅಗತ್ಯದ ನೆರವಿದ್ದರೆ ಸರ್ಕಾರ ಸ್ಪಂದಿಸುತ್ತದೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದಿದ್ದಾರೆ.
ಅಸ್ವಸ್ಥಗೊಂಡವರ ಪೈಕಿ 6-7 ಜನರ ಪರಿಸ್ಥಿತಿ ಚಿಂತಾಜನಕವಾಗಿದೆ.ಅವರನ್ನು ಬೇರೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 400 ಆಂಬ್ಯುಲೆನ್ಸ್ ಗಳನ್ನು ಖರೀದಿ ಮಾಡಲಾಗುವುದು, ವೈದ್ಯರ ಕೊರತೆ ನೀಗಿಸಲು 360 ವೈದ್ಯರನ್ನು ನೇಮಿಸಿಕೊಳ್ಳಲಾಗುವುದು ಎಂದು ಶಿವಾನಂದ ಪಾಟೀಲ್ ಹೇಳಿದ್ದಾರೆ.