ಕೊಳ್ಳೇಗಾಲ: ಸುಳ್ವಾಡಿ ಗ್ರಾಮದ ಕಿಚ್ಚುಗುತ್ತಿ ಮಾರಮ್ಮ ದೇವಸ್ಥಾನದ ಪ್ರಸಾದ ಸೇವಿಸಿ 14 ಮಂದಿ ಸಾವಿಗೀಡಾದ ಪ್ರಕರಣಕ್ಕೆ ಮಹತ್ವದ ತಿರುವು ದೊರಕಿದೆ. ಪ್ರಸಾದದಲ್ಲಿ ಕೀಟನಾಶಕ ಬೆರೆತಿರುವುದು ಖಚಿತವಾಗಿದೆ.
ವಿಧಿವಿಜ್ಞಾನ ಪ್ರಯೋಗಾಲಯ(ಎಫ್‍ಎಸ್‍ಎಲ್) ವರದಿ ಬಹಿರಂಗವಾಗಿದ್ದು ಇದರಲ್ಲಿ ಪ್ರಸಾದದಲ್ಲಿ ಮೋನೋ ಕ್ರೊಟೋಫೋಸ್ ಎಂಬ ಕೀಟನಾಶಕ ಬೆರೆತದ್ದು ಸ್ಪಷ್ಟವಾಗಿದೆ ಎಂದು ದಕ್ಷಿಣ ವಲಯ ಐಜಿಪಿ ಶರತ್ ಚಂದ್ರ ಹೇಳಿದ್ದಾರೆ.
ದುಷ್ಕರ್ಮಿಗಳು ಮೊದಲು ನೀರಿನಲ್ಲಿ ಕೀಟನಾಶಕ ಬೆರೆಸಿ ಬಳಿಕ ಅದನ್ನು ಪ್ರಸಾದಕ್ಕೆ ಬೆರೆಸಿದ್ದರೆನ್ನುವುದು ಪ್ರಾಥಮಿಕ ತನಿಖೆಯಿಂದ ಬಹಿರಂಗವಾಗಿದೆ.
"ಪ್ರಸಾದದಲ್ಲಿ ಆರ್ಗಾನ್ ಪಾಸ್ಪಾರಸ್ ಕಾಂಪೌಂಡ್ ಮೊನೊ ಕ್ರೋಟೋ ಫೋಸ್ ಮಿಶ್ರಣ ಆಗಿದೆ ಎಂಬ ವರದಿ ಬಂದಿದೆ.ಇವು ಕೀಟನಾಶಕವಾಗಿದೆ.ಗಿಡಗಳಿಗೆ ಹುಳು, ರೋಗ ಬಾರದಂತೆ ಇದನ್ನು ಬಳಸಲಾಗುತ್ತದೆ" ಎಂದ ಐಜಿಪಿ ತನಿಖೆ ಸರಿಯಾದ ಮಾರ್ಗದಲ್ಲಿ ಸಾಗುತ್ತಿದೆ, ಒಟ್ಟು 13 ಅಧಿಕಾರಿಗಳ ತಂಡ ಪ್ರಕರಣದ ತನಿಖೆ ಕೈಗೊಂಡಿದೆ ಎಂದು ಮಾಹಿತಿ ನೀಡಿದರು.