ಬೆಂಗಳೂರು: ಅನ್ನನಾಳದಲ್ಲಿ ತೊಂದರೆ ಕಾಣಿಸಿಕೊಂಡ ಹಾಗೂ ಬೆನ್ನು ಮೂಳೆ ಸಮರ್ಪಕವಾಗಿ ಬೆಳವಣಿಗೆಯಾಗದ ಕಾರಣ ಮಹಿಳೆಯೊಬ್ಬರ 21 ವಾರದ ಭ್ರೂಣವನ್ನು ಗರ್ಭಪಾತ ಮಾಡಿಸಲು ಹೈಕೋರ್ಟ್ ಸೋಮವಾರ ಅನುಮತಿ ನೀಡಿದೆ.
ನ್ಯಾಯಾಲಯದ ನಿರ್ದೇಶನದ ಮೇರೆಗೆ ರಚನೆಯಾಗಿದ್ದ ವಾಣಿ ವಿಲಾಸ ಆಸ್ಪತ್ರೆಯ ವೈದ್ಯಕೂಯ ಸೂಪರಿಂಟೆಂಡೆಂಟ್ ನೇತೃತ್ವದ ತಜ್ಞ ವೈದ್ಯರ ತಂಡದ ವರದಿ ಆಧರಿಸಿ ಗರ್ಭಪಾತ ಮಾಡಿಸಲು ಮಹಿಳೆಗೆ ನ್ಯಾಯಾಲಯ ಅನುಮತಿ ನೀಡಿದೆ.
ಮಹಿಳೆಯು ತನ್ನದೇ ವೆಚ್ಚ ಹಾಗೂ ರಿಸ್ಕ್ ನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಗರ್ಭಪಾತ ಮಾಡಿಸಿಕೊಳ್ಳಬಹುದು. ಈ ವಿಚಾರ ಸಂಬಂಧ ಭವಿಷ್ಯದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಎದುರಾದರೂ, ಅದಕ್ಕೆ ನ್ಯಾಯಾಲಯ ರಚಿಸಿದ್ದ ವೈದ್ಯಕೀಯ ಮಂಡಳಿ ಹೊಣೆಯಲ್ಲ ಹಾಗೂ ಮಂಡಳಿಯನ್ನು ದೂಷಿಸುವಂತಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ನಗರದ 29 ವರ್ಷದ ಮಹಿಳೆಯೊಬ್ಬರು ಗರ್ಭಪಾತಕ್ಕೆ ಅನುಮತಿ ಕೋರಿ ಹೈಕೋರ್ಟ್'ಗೆ ಅರ್ಜಿ ಸಲ್ಲಿಸಿದ್ದರು. ಡಿ.13ರಂದು ವಿಚಾರಣೆ ನಡೆಸಿದ್ದ ಪೀಠ, ವಾಣಿ ವಿಲಾಸ ಆಸ್ಪತ್ರೆಯ ವೈದ್ಯಕೀಯ ಸೂಪರಿಂಟೆಂಡೆಂಟ್ ನೇತೃತ್ವದಲ್ಲಿ ತಜ್ಞ ವೈದ್ಯರ ತಂಡವನ್ನು ರಚನೆ ಮಾಡಿತ್ತು.