ರಾಜ್ಯ

ಬೆಂಗಳೂರು: ದಾಖಲೆ ಇಲ್ಲದ ಸಂಗ್ರಹಿಸಿದ್ದ 12 ಕೋಟಿ ರೂ. ಮೌಲ್ಯದ ಅಡಿಕೆ ಜಪ್ತಿ

Raghavendra Adiga
ಬೆಂಗಳೂರು: ದಾಖಲೆಯಿಲ್ಲದೆ ಗೋದಾಮಿನಲ್ಲಿ ಸಾಂಗ್ರಹಿಸಲಾಗಿದ್ದ ಬರೋಬ್ಬರಿ  12 ಕೋಟಿ ರೂ. ಮೌಲ್ಯದ ಅಡಿಕೆಯನ್ನು ಕರ್ನಾಟಕ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಪತ್ತೆ ಮಾಡಿ ವಶಕ್ಕೆ ಪಡೆದಿದ್ದಾರೆ.ಇದೇ ವೇಳೆ 72 ಲಕ್ಷ ರೂ. ಹಣವನ್ನು ತೆರಿಗೆ ಹಾಗೂ ದಂಡದ ರೂಪದಲ್ಲಿ ಕಟ್ಟಿಸಿಕೊಳ್ಳಲಾಗಿದ್ದು ಗೋದಾಮನ್ನು ಜಪ್ತಿ ಮಾಡಲಾಗಿದೆ.
ವಾಣಿಜ್ಯ ತೆರಿಗೆ ಇಲಾಖೆಯ ದಕ್ಷಿಣ ವಲಯದ ಅಪರ ಆಯುಕ್ತ ನಿತೇಶ್ ಪಾಟೀಲ್ ಹಾಗೂ ಅಧಿಕಾರಿಗಳು ಖಚಿತ ಮಾಹಿತಿ ಪಡೆದು ತುಮಕೂರಿನ ಅಂತರಸನಹಳ್ಳಿಯಲ್ಲಿದ್ದ ಗೋದಾಮಿನ ಮೇಲೆ ದಾಳಿ ನಡೆಸಿದ್ದಾರೆ.ಒಟ್ಟು ಎರಡು ಗೋದಾಮುಗಳಲ್ಲಿ ಸಂಗ್ರಹಿಸಲಾಗಿದ್ದ 4,670 ಕ್ವಿಂಟಾಲ್ ಅಡಿಕೆಯನ್ನು ವಶಕ್ಕೆ ಪಡೆಯಲಾಗಿದೆ.
ಗೋದಾಮುಗಳ ಮೇಲೆ ಯಾವುದೇ ನಾಮಫಲಕಗಳಿರಲಿಲ್ಲ. ಈ ಬಗ್ಗೆ ವಿಚಾರಿಸಿದಾಗ ಮೊದಲಿಗೆ ಇದೊಂದು ರೈಸ್ ಮಿಲ್ ಎಂದೂ ಇಲ್ಲಿ ಭತ್ತವನ್ನು ದಾಸ್ತಾನು ಇಡಲಾಗುತ್ತದೆ ಎಂದೂ ಅಲ್ಲಿನ ಕೆಲಸಗಾರರು, ಮಾಲೀಕರು ಹೇಳೀದ್ದಾರೆ. ಅಲ್ಲದೆ ಅಧಿಕಾರಿಗಳನ್ನು ಒಳಗೆ ಬಿಡಲು ಒಪ್ಪಲಿಲ್ಲ ಎನ್ನಲಾಗಿದೆ.
ಅಧಿಕೃತ ಪತ್ರದೊಡನೆ ಗೋದಾಮು ಪ್ರವೇಶಿಸಿದ್ದ ಅಧಿಕಾರಿಗಳಿಗೆ ಬೃಹತ್ ಪ್ರಮಾಣದಲ್ಲಿ ಅಡಿಕೆ ದಾಸ್ತಾನು ಮಾಡಿರುವುದು ಪತ್ತೆಯಾಗಿದೆ. ಒಟ್ಟು  1.2 ಕೋಟಿಗಳಷ್ಟು ತೆರಿಗೆ ಹಾಗೂ ದಂಡ ಒಳಗೊಂಡು ಇದಾಗಲೇ 72 ಲಕ್ಷ ರು. ಹಣ ವಸೂಲಿ ಮಾಡಲಾಗಿದ್ದು ತನಿಖೆ ಇನ್ನೂ ಪ್ರಗತಿಯಲ್ಲಿದೆ.
SCROLL FOR NEXT