ಬೆಂಗಳೂರು: ರಾಜ್ಯದ ಹಿರಿಯ ಐಪಿಎಸ್ ಅಧಿಕಾರಿ ಸಂಜಯ್ ಸಹಾಯ್ ಅವರು ದರೋಡೆಗೆ ಒಳಗಾಗಿದ್ದಾರೆ.
ಎಚ್‌ಎಸ್‌ಆರ್ ಲೇಔಟ್‌ನಲ್ಲಿ ತಮ್ಮ ಮನೆ ಬಳಿ ಗುರುವಾರ ರಾತ್ರಿ8.45 ರ ವೇಳೆಗೆ ವಾಕಿಂಗ್ ಮಾಡುತ್ತಿದ್ದ, ರಾಜ್ಯ ಕಂಪ್ಯೂಟರ್ ವಿಂಗ್‌ನ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಸಂಜಯ್ ಸಹಾಯ್ ಅವರ ಮೊಬೈಲ್‌ಅನ್ನು ಕಳ್ಳರು ಕಿತ್ತೊಯ್ದಿದ್ದಾರೆ.
ಹೆಲ್ಮೆಟ್ ಧರಿಸಿದ್ದ ಇಬ್ಬರ ಪೈಕಿ ಒಬ್ಬ , ಸಂಜಯ್ ಸಹಾಯ್ ಅವರ ಬಳಿ ನಡೆದುಕೊಂಡು ಬಂದು ಮೊಬೈಲ್ ಕಿತ್ತುಕೊಂಡು ಓಡಲು ಆರಂಭಿಸಿದ್ದ. ಸಂಜಯ್ ಸಹಾಯ್ ಆತನನ್ನು ಸ್ವಲ್ಪ ದೂರ ಅಟ್ಟಿಸಿಕೊಂಡು ಹೋಗಿದ್ದಾರೆ. ಸಮೀಪದಲ್ಲೇ ಬೈಕ್‌ನಲ್ಲಿ ಬಂದಿದ್ದ ಇನ್ನೊಬ್ಬ ಸಹಚರ ಈತನನ್ನು ಬೈಕ್‌ನಲ್ಲಿ ಕೂರಿಸಿಕೊಂಡು ತೆರಳಿದ್ದಾನೆ.
ನಂತರ ಸಂಜಯ್ ಸಹಾಯ್ ಅವರು ಎಚ್‌ಎಸ್‌ಆರ್ ಲೇಔಟ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸ್ಥಳೀಯ ಸಿಸಿಟಿವಿ ಕ್ಯಾಮೆರಾಗಳ ಪರಿಶೀಲನೆ ನಡೆಸಿದ್ದಾರೆ.
ಸಂಜಯ್ ಸಹಾಯ್ ಅವರು 2016ರಲ್ಲಿ ಮಾನವ ಹಕ್ಕುಗಳು ಮತ್ತು ಕುಂದು ಕೊರತೆ ವಿಭಾಗದ ಎಡಿಜಿಪಿ ಆಗಿದ್ದ ವೇಳೆಯೂ ಕಳ್ಳರು ಅವರ ಮೊಬೈಲ್ ಫೋನ್ ದೋಚಿದ್ದರು. 2016 ರಲ್ಲಿ ಬೈಕ್ ನಲ್ಲಿ ಬಂದ ಇಬ್ಬರು ಸಂಜಯ್ ಸಹಾಯ್ ಅವರ ಮೊಬೈಲ್ ಕದ್ದುಕೊಂಡು ಹೋಗಿದ್ದರು.