ಬೆಂಗಳೂರು: ಪಾಲಿಕೆ ವತಿಯಿಂದ ಅಯೋಜಿಸಲಾಗುವ ಅಧಿಕಾರಿಗಳ ಸಭೆ, ಸಮಾರಂಭ ಸೇರಿ ಅನೇಕ ಕಾರ್ಯಕ್ರಮಗಳು ಹಾಗೂ ಕಚೇರಿಯಲ್ಲಿ ನೀರಿನ ಬಾಟಲಿ ಸೇರಿ ಇತರೆ ಪ್ಲಾಸ್ಟಿಕ್ ಸಾಮಾಗ್ರಿಗಳನ್ನು ಬಳಕೆ ನಿಷೇಧಕ್ಕೆ ಬಿಬಿಎಂಪಿ ಆದೇಶ ಹೊರಡಿಸಿದೆ ಎಂದು ತಿಳಿದುಬಂದಿದೆ.
ಪ್ಲಾಸ್ಟಿಕ್ ಬಳಕೆ ನಿಷೇಧ ಕುರಿತಂತೆ ಈಗಾಗಲೇ ಎಲ್ಲಾ ಭಾಗದಲ್ಲಿರುವ ಬಿಬಿಎಂಪಿ ಕೇಂದ್ರ ಕಚೇರಿಗಳು, ಪಾಲಿಕೆಯ ಎಲ್ಲಾ ಅಧೀನ ಕಚೇರಿಗಳಿಗೆ ಸುತ್ತೋಲೆ ಹೊರಡಿಸಿರುವ ಬಿಬಿಎಂಪಿ, ಪಾಲಿಕೆ ವತಿಯಿಂದ ಆಯೋಜಿಸಲುವ ಯಾವುದೇ ಕಾರ್ಯಕ್ರಮ, ಸಮಾರಂಭ ಹಾಗೂ ಅಧಿಕಾರಿಗಳ ಸಭೆ, ಕಚೇರಿಗಳಲ್ಲಿ ಪ್ಲಾಸ್ಟಿಕ್ ಬಾಟಲಿ, ತಟ್ಟೆ, ಲೋಟಗಳು ಸೇರಿ ಇತರೆ ವಸ್ತುಗಳನ್ನು ಬಳಕೆ ಮಾಡದಂತೆ ಸೂಚಿಸಿದೆ ಎಂದು ವರದಿಗಳು ತಿಳಿಸಿದೆ.
ಪಾಲಿಕೆಯಲ್ಲಿ ಪ್ಲಾಸ್ಟಿಕ್ ನೀರಿನ ಬಾಟಲ್ ಗಳ ಬಳಕೆಯನ್ನು ನಿಷೇಧಿಸಿ ಆದೇಶವನ್ನು ಕಡ್ಡಾಯವಾಗಿ ಅನುಷ್ಟಾನಗೊಳಿಸಲು ಪರ್ಯಾಯವಾಗಿ ಪ್ರತಿ ಕಚೇರಿಗೆ ಅಗತ್ಯವಿರುವ ಸಾಮೂಹಿಕ ಕುಡಿಯವ ನೀರಿನ ವಿತರಣಾ ವ್ಯವಸ್ಥೆಯನ್ನು ಮಾಡಲು ನಿರ್ಧರಿಸಲಾಗಿದೆ.
ಇದಕ್ಕಾಗಿ ಆರ್.ಓ-ಯು.ವಿ ನೀರಿನ ಶುದ್ಧೀಕರಣ ಘಟಕ, ಕುಡಿಯುವ ನೀರಿನ ಸ್ಟೀಲ್ ಅಥವಾ ಗಾಜಿನ ಬಾಟಲಿಗಳು ಹಾಗೂ ಲೋಟಗಳನ್ನು ಖರೀದಿಸಲು ಪಾಲಿಕೆಯ ಎಲ್ಲಾ ಬಿಬಿಎಂಪಿ ಕಚೇರಿಗಳ ಇಲಾಖೆ ಮುಖ್ಯಸ್ಥರಿಗೆ ಸೂಚಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರು, ಪರಿಸರಕ್ಕೆ ಎದುರಾಗುತ್ತಿರುವ ಸಮಸ್ಯೆಗಳನ್ನು ನಿಯಂತ್ರಿಸುವ ಸಲುವಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಬಿಬಿಎಂಪಿ ನಿಯಂತ್ರಣದಲ್ಲಿ ಆಯೋಜನೆಗೊಳ್ಳುವ ಯಾವುದೇ ಕಾರ್ಯಕ್ರಮದಲ್ಲಿಯೂ ಇನ್ನು ಮುಂದೆ ಪ್ಲಾಸ್ಟಿಕ್ ವಸ್ತುಗಳನ್ನು ಬಳಕೆ ಮಾಡುವಂತಿಲ್ಲ ಎಂದು ತಿಳಿಸಿದ್ದಾರೆ.