ರಾಜ್ಯ

'ಶೂಟೌಟ್ ಮಾಡಿ': ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಭಾರೀ ವಿರೋಧ

Manjula VN
ಬೆಂಗಳೂರು: ಜೆಡಿಎಸ್ ಕಾರ್ಯಕರ್ತ ಪ್ರಕಾಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಕುಮಾರಸ್ವಾಮಿಯವರು ನೀಡಿದ್ದ ಆರೋಪಿಗಳ ಶೂಟೌಟ್ ಮಾಡಿ ಹೇಳಿಕೆ ಇದೀಗ ವಿವಾದದ ಸ್ವರೂಪ ಪಡೆದುಕೊಂಡಿದೆ. 
ಕುಮಾರಸ್ವಾಮಿಯ ಹೇಳಿಕೆಗೆ ಬಿಜೆಪಿ ಸೇರಿ ಹಲವು ವಲಯಗಳಿಂದ ತೀವ್ರ ಆಕ್ರೋಶಗಳು ವ್ಯಕ್ತವಾಗತೊಡಗಿದೆ. ಈ ಮಧ್ಯೆಯೇ, ಅದು ಉದ್ವೇಗದಲ್ಲಿ ನೀಡಿದ ಹೇಳಿಕೆ. ಸಿಎಂ ಆಗಿ ನೀಡಿದ ಆದೇಶ ಅಲ್ಲ ಎಂದು ಕುಮಾರಸ್ವಾಮಿಯವರು ಸಮರ್ಥಿಸಿಕೊಂಡಿದ್ದಾರೆ. 
ಕುಮಾರಸ್ವಾಮಿಯವರ ಹೇಳಿಕೆಗೆ ರಾಜ್ಯ ಬಿಜೆಪಿ ತೀವ್ರ ವಿರೋಧ ವಿರೋಧ ವ್ಯಕ್ತಪಡಿಸಿದೆ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ಮಾತನಾಡಿ, ಪಕ್ಷದ ಕಾರ್ಯಕರ್ತ ಎನ್ನುವ ವ್ಯಾಮೋಹದಲ್ಲಿ ಕುಮಾರಸ್ವಾಮಿಯವರು ತಾವೊಬ್ಬ ರಾಜ್ಯದ ಮುಖ್ಯಮಂತ್ರಿ ಎನ್ನುವುದನ್ನೇ ಮರೆತಿದ್ದಾರೆ. ಮುಖ್ಯಮಂತ್ರಿಗಳೇ ಈ ರೀತಿ ಹೇಳಿಕೆ ನೀಡಿದರೆ, ಕಾನೂನು ಸುವ್ಯವಸ್ಥೆ ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದ್ದಾರೆ. 
ಇದರಂತೆ ಬಿಜೆಪಿ ಮುಖಂಡ ಶ್ರೀರಾಮುಲು ಪ್ರತಿಕ್ರಿಯೆ ನೀಡಿ, ಹಿಂದೂ ಕಾರ್ಯಕರ್ತರು ಕೊಲೆಗೀಡಾದಾಗ ಕುಮಾರಸ್ವಾಮಿ ಬಾಯಲ್ಲಿ ಈ ರೀತಿಯ ಮಾತು ಏಕೆ ಬರಲಿಲ್ಲ ಎಂದು ಪ್ರಶ್ನಿಸಿದರು. 
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮಾತನಾಡಿ, ಇದು ವೈಯಕ್ತಿಕ ಹೇಳಿಕೆ ಎನ್ನುವುದೇ ಆದರೆ, ಕುಮಾರಸ್ವಾಮಿ ಬೇಕೆ, ಮುಖ್ಯಮಂತ್ರಿ ಕುಮಾರಸ್ವಾಮಿ ಬೇರೆನಾ ಎಂದು ಪ್ರಶ್ನಿಸಿದ್ದಾರೆ. 
ಮಾಜಿ ಎಸಿಪಿ ಬಿ.ಕೆ.ಶಿವರಾಮ್ ಅವರು ಮಾತನಾಡಿ, ಇಂತಹ ನಿರ್ದೇಶನಗಳನ್ನು ಆದೇಶವೆಂದು ತೆಗೆದುಕೊಳ್ಳುವುದಿಲ್ಲ. ಒಬ್ಬ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿಯವರು ಪೊಲೀಸ್ ಅಧಿಕಾರಿಗಳಿ ಈ ರೀತಿಯ ನಿರ್ದೇಶನಗಳನ್ನು ನೀಡಬಾರದು. ಒಂದು ವೇಳೆ ಯಾರಾದರೂ ಈ ನಿರ್ದೇಶನವನ್ನು ಪಾಲಿಸಿದ್ದೇ ಆದರೆ, ಅವರ ವಿರುದ್ದ ಕೊಲೆ ಪ್ರಕರಣ ದಾಖಲಾಗುತ್ತದೆ ಎಂದು ತಿಳಿಸಿದ್ದಾರೆ. 
SCROLL FOR NEXT