ಬೆಂಗಳೂರು: ಮೈಸೂರು ರಸ್ತೆಯ ಬಾಲಗಂಗಾಧರನಾಥ ಸ್ವಾಮೀಜಿ ಮೇಲ್ಸೇತುವೆ ರಸ್ತೆ ದುರಸ್ತಿ ಕಾಮಗಾರಿ ಹಿನ್ನಲೆಯಲ್ಲಿ ಡಿ.28ರಿಂದ ಫೆ.15ರವರೆಗೆ ಮೇಲ್ಸೇತುವೆ ರಸ್ತೆ ಸಂಚಾರ ಭಾಗಶಃ ಬಂದ್ ಆಗಲಿದೆ.
ಮೇಲ್ಸೇತುವೆಯ ದುರಸ್ತಿ (ರೀಸರ್ಫೇಸಿಂಗ್) ಕಾಮಗಾರಿ ಹಿನ್ನಲೆಯಲ್ಲಿ ಶುಕ್ರವಾರದಿಂದ ಪ್ರತಿದಿನ ಬೆಳಿಗ್ಗೆ 6 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಮೈಸೂರು ರಸ್ತೆ ಕಡೆಯಿಂದ ಕೆಂಪೇಗೌಡ ಬಸ್ ನಿಲ್ದಾಣ, ಕೆ.ಆರ್.ಮಾರುಕಟ್ಟೆ, ಟೌನ್'ಹಾಲ್ ಕಡೆಗೆ ಸಂಚರಿಸುವ ವಾಹನಗಳಿಗೆ ಮಾತ್ರ ಮೇಲ್ಸೇತುವೆ ಮೇಲೆ ಪ್ರವೇಶವಿರುತ್ತದೆ.
ಮಧ್ಯಾಹ್ನ 3ರಿಂದ ರಾತ್ರಿ 11ರವರೆಗೆ ಟೌನ್ ಹಾಲ್ ಕಡೆಯಿಂದ ಮೈಸೂರು ರಸ್ತೆ ಕಡೆಗೆ ಸಂಚರಿಸುವ ವಾಹನಗಳಿಗೆ ಮಾತ್ರ ಪ್ರವೇಶವಿರಲಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರು ತಿಳಿಸಿದ್ದಾರೆ.