ರೌಡಿ ಜೊತೆ ಪಿಎಸ್ಐ ಟಪ್ಪಾನ್'ಗುಚ್ಚಿ ಡ್ಯಾನ್ಸ್: ವಿಡಿಯೋ ವೈರಲ್
ಹುಬ್ಬಳ್ಳಿ: ಅಪರಾಧವೆಸಗಿ ಜೈಲು ಶಿಕ್ಷೆಗೆ ಗುರಿಯಾಗಿದ್ದ ರೌಡಿಶೀಟರ್'ಗಳ ಜೊತೆ ಕುಡಿದು ನಡುರಸ್ತೆಯಲ್ಲಿಯೇ ಪಿಎಸ್ಐ ಡ್ಯಾನ್ಸ್ ಮಾಡಿದ್ದು, ಈ ವಿಡಿಯೋ ಇದೀಗ ವೈರಲ್ ಆಗಿದೆ.
ಹುಬ್ಭಳ್ಳಿಯ ಉಪನಗರ ಪೊಲೀಸ್ ಠಾಣೆಯ ಪಿಎಸ್ಐ ಬಸವರಾಜು ಹೂಗಾರ ಅವರು ಕುಡಿದು ರೌಡಿಗಳೊಂದಿಗೆ ಮಸ್ತ್ ಮಜಾ ಮಾಡಿ, ನಡುರಸ್ತೆಯಲ್ಲಿಯೇ ಟಪ್ಪಾನ್'ಗುಚ್ಚಿ ಡ್ಯಾನ್ಸ್ ಮಾಡಿದ್ದಾರೆ.
ಸಬ್ ಜೈಲ್ ಗಲಾಟೆ ಪ್ರಕರಣದಲ್ಲಿ ಮೂರು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ರೌಡಿ ಶೀಟರ್ ದುರ್ಗಪ್ಪ ಬಿಜವಾಡ ಹಾಗೂ ಶಿವರಾಜ್ ಗೌರಿ ಜೊತೆಗೆ ಬಸವರಾಜು ಅವರು ಡ್ಯಾನ್ಸ್ ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಪರಾಧಿಗಳೊಂದಿಗಿನ ಪಿಎಸ್ಐ ವರ್ತನೆ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ಪೊಲೀಸ್ ಆಯುಕ್ತ ಎಂ.ಎನ್.ನಾಗರಾದ್ ಅವರು, ವಿಡಿಯೋ ಸಂಬಂಧ ತನಿಖೆಗೆ ಆದೇಶಿಸಲಾಗಿದೆ. ಇದು ಹಳೆಯ ವಿಡಿಯೋ ಎಂದೆನಿಸುತ್ತಿದೆ. ಆದರೂ, ಈ ಬಗ್ಗೆ ನಾವು ಕ್ರಮ ಕೈಗೊಳ್ಳುತ್ತಿವೆ. ವಿಡಿಯೋ ಸಾಕಷ್ಟು ಆಶ್ಚರ್ಯವನ್ನು ತಂದಿದೆ. ಪ್ರಕಱಣ ಸಂಬಂಧ ಪಿಎಸ್ಐನನ್ನು ಅಮಾನತು ಮಾಡಲಾಗಿದೆ ಎಂದು ಹೇಳಿದ್ದಾರೆ.
ರೌಡಿಗಳೊಂದಿಗೆ ಪೊಲೀಸ್ ಅಧಿಕಾರಿ ಆಪ್ತರಾಗಿರುವುದು ಉತ್ತಮ ಬೆಳವಣಿಗೆಯಲ್ಲ. ತನಿಖೆ ವೇಳೆ ಪೊಲೀಸರು ಕೆಲವೊಮ್ಮೆ ರೌಡಿಗಳೊಂದಿಗೆ ಆತ್ಮೀಯವಾಗಿರಬೇಕಾಗುತ್ತದೆ. ಆದರೆ, ಅವರೊಂದಿಗೆ ಸ್ನೇಹ ಮಾಡಿಕೊಂಡು ಬಹಿರಂಗವಾಗಿ ಡ್ಯಾನ್ಸ್ ಮಾಡುವುದು ಸರಿಯಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics