

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ನಾಯಕರ ನಡುವಿನ ವಾಕ್ಸಮರ ಮುಂದುವರೆದಿದೆ. ನನ್ನ ಕ್ಷೇತ್ರಕ್ಕೆ ನಾನೇ ಬಾಸ್. ನನ್ನು ಕ್ಷೇತ್ರದಲ್ಲಿ ಯಾರೂ ಹಸ್ತಕ್ಷೇಪ ಮಾಡುವುದು ಬೇಡ ಎಂದು ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅವರದ್ದು ಎನ್ನಲಾದ ಭಾಷಣದ ವಿಡಿಯೋ ಇದೀಗ ವೈರಲ್ ಆಗಿದೆ.
ಚಿಂತಾಮಣಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಾ. ಎಂಸಿ ಸುಧಾಕರ್ ಹಾಗೂ ಕಾಂಗ್ರೆಸ್ ಮುಖಂಡ ರಕ್ಷಾ ರಾಮಯ್ಯ ವಿರುದ್ಧ ಪ್ರದೀಪ್ ಈಶ್ವರ್ ಪರೋಕ್ಷ ಬಂಡಾಯ ಸಾರಿದ್ದಾರೆ. ನನಗೆ ದಲಿತರು. ಮುಸ್ಮಿಮರ ವೋಟುಗಳೇ ಸಾಕು. ನನಗೆ ಮೇಲ್ಜಾತಿಯವರ ವೋಟುಗಳು ಬೇಡ. ನಾನು ದಲಿತರ ಪರ ನಾಯಕ ಅಂತಾನೇ ಅಂದುಕೊಳ್ಳಲಿ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಆಯೋಜಿಸಿದ್ದ ಆಗ್ನೇಯ ಪದವೀಧರ ಕ್ಷೇತ್ರದ ಕಾರ್ಯಕರ್ತರ ಸಭೆಯಲ್ಲಿ ಪ್ರದೀಪ್ ಈಶ್ವರ್ ಈ ಡೈಲಾಗ್ ಹೊಡೆದಿದ್ದಾರೆ ಎನ್ನಲಾಗಿದೆ. ನನ್ನ ಕ್ಷೇತ್ರದಲ್ಲಿ ಬೇರೆ ಕ್ಷೇತ್ರದ ಶಾಸಕರ ಹಸ್ತಕ್ಷೇಪ ಇತ್ತು. ಇದರಿಂದ ಕೆಲವು ಕಡೆ ಕಾಂಗ್ರೆಸ್ ಅಭ್ಯರ್ಥಿಗಳು ಸೋತರು. ಯಾರಾದರೂ ನನ್ನ ಕ್ಷೇತ್ರಕ್ಕೆ ಕೈ ಹಾಕಿದರೆ ನಾನು ಬಿಡುವುದಿಲ್ಲ ಎಂದು ಹೇಳಿದ್ದಾರೆ.