ರಾಜ್ಯ

ಬೆಂಗಳೂರಿಗರೇ, ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡಿದರೆ ಎಚ್ಚರ, ನಿಮಗೆ ಕಾದಿದೆ ದಂಡ!

Sumana Upadhyaya

ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಬಾರದು ಎಂಬ ಕಾನೂನು ಬಹಳ ವರ್ಷಗಳಿಂದಲೇ ಇದೆ. ಆದರೆ ಅದನ್ನು ಪಾಲಿಸುವವರು ವಿರಳ. ಬೆಂಗಳೂರು ನಗರದ ಅಲ್ಲಲ್ಲಿ ಪೊಲೀಸರು ಇಂತಹ ಸಿಗರೇಟು ಪ್ರಿಯರಿಗೆ ಭರ್ಜರಿಯಾಗಿ ಕತ್ತರಿ ಹಾಕಲು ಮುಂದಾಗಿದ್ದು ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು ಕಂಡರೆ ದಂಡ ವಿಧಿಸುತ್ತಾರೆ.

ನಗರದ ವಿ.ವಿ.ಪುರಂನಲ್ಲಿ ಅತ್ಯಧಿಕ ದಂಡ ಮೊತ್ತವನ್ನು ಸಂಗ್ರಹಿಸಿರುವ ಪೊಲೀಸರು ತಂಬಾಕು ಉತ್ಪನ್ನ ಕಾಯ್ದೆ 2003ರಡಿಯಲ್ಲಿ ದಕ್ಷಿಣ ಬೆಂಗಳೂರಿನ ವಿ.ವಿ.ಪುರಂನಲ್ಲಿ ಸುಮಾರು 20 ಲಕ್ಷ ರೂಪಾಯಿ ದಂಡ ಮೊತ್ತ ಸಂಗ್ರಹಿಸಿದ್ದಾರೆ. ಮೈಕೋ ಲೇ ಔಟ್ ನಲ್ಲಿ 13,90,000, ಚಿಕ್ಕಪೇಟೆಯಲ್ಲಿ 13,44,000 ಸಂಗ್ರಹಿಸಿದ್ದಾರೆ. ಬೆಂಗಳೂರಿನಲ್ಲಿ ಇದುವರೆಗೆ ಒಟ್ಟು 66,39,580 ರೂಪಾಯಿ ದಂಡ ಸಂಗ್ರಹಿಸಲಾಗಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ನಿಯಮ ಪ್ರಕಾರ, ಪಬ್, ರೆಸ್ಟೋರೆಂಟ್, ಕೆಫೆಗಳಲ್ಲಿ ನಿಗದಿತ ಸ್ಥಳಗಳಲ್ಲಿ ಧೂಮಪಾನ ಸೇವನೆಗೆ ಅನುಮತಿಯಿದೆ. ಕೊಟ್ಪಾದ ಸೆಕ್ಷನ್ 4ರ ಪ್ರಕಾರ, ಒಬ್ಬ ವ್ಯಕ್ತಿ ಬಸ್, ರೈಲ್ವೆ ನಿಲ್ದಾಣ, ಸಿನಿಮಾ ಮಂದಿರ, ಆಸ್ಪತ್ರೆ, ಗ್ರಂಥಾಲಯ, ಸರ್ಕಾರಿ ಆಸ್ಪತ್ರೆ ಮೊದಲಾದ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಸೇವಿಸುವುದು ಕಂಡುಬಂದರೆ 200 ರೂಪಾಯಿಗಳವರೆಗೆ ದಂಡ ವಿಧಿಸಬಹುದು.

ಆದರೆ ಕೆಲವು ಬಾರ್, ರೆಸ್ಟೋರೆಂಟ್ ಗಳಲ್ಲಿ ಧೂಮಪಾನ ಸೇವನೆಗೆ ಸ್ಥಳ ನಿಗದಿಪಡಿಸಿರುವುದಿಲ್ಲ. ಸಿಗರೇಟು ಸೇವಿಸುವವರಿಗೆ ಬೇರೆ ಆಯ್ಕೆಗಳಿರುವುದಿಲ್ಲ ಎನ್ನುತ್ತಾರೆ ನಗರ ನಿವಾಸಿ ರಾಜಶ್ರೀ ಶೇಖರ್.

ವಿವಿ ಪುರಂ ಇನ್ಸ್ ಪೆಕ್ಟರ್ ಶಿವ ಶಂಕರ್ ಹೇಳುವ ಪ್ರಕಾರ, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಸೇವನೆ ಮಾಡುವವರನ್ನು ಪತ್ತೆ ಹಚ್ಚಿ ದಂಡ ವಿಧಿಸುವ ಕ್ರಮ ಪರಿಣಾಮಕಾರಿಯಾಗಿ ಜಾರಿಗೆ ಬರಬೇಕು ಎನ್ನುತ್ತಾರೆ.

SCROLL FOR NEXT