ಬೆಂಗಳೂರು: ಬಜೆಟ್ ನಲ್ಲಿ ಪರಿಶಿಷ್ಟ ಜಾತಿಗೆ ಕಲ್ಪಿಸಬೇಕಾದ ಅನುಕೂಲತೆಗಳ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ದಲಿತ ಮುಖಂಡರೊಂದಿಗೆ ಬಜೆಟ್ ಪೂರ್ವಭಾವಿ ಸಭೆ ಕರೆದಿದ್ದರು. ಈ ವೇಳೆ ಪರಿಶಿಷ್ಟರಿಗೆ ಒಳಮೀಸಲಾತಿ ಕಲ್ಪಿಸುವ ಸದಾಶಿವ ಆಯೋಗದ ವರದಿ ವಿಚಾರ ಪ್ರಸ್ತಾಪವಾಗಿ ವಾದ -ವಿವಾದಗಳು ನಡೆದು ದಲಿತ ಮುಖಂಡರುಗಳು ಸಭೆಯಿಂದ ಹೊರ ನಡೆದ ಪ್ರಸಂಗ ನಡೆಯಿತು.
ಪರಿಶಿಷ್ಟ ಜಾತಿಯ ವಿವಿಧ ಕಲ್ಯಾಣ ಯೋಜನೆಗಳಿಗೆ ಹಣ ಹಂಚಿಕೆ ಮಾಡುವ ಕುರಿತು ಸಿಎಂ ಸಿದ್ದರಾಮಯ್ಯ ಅವರು ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಸಭೆ ಕರೆದಿದ್ದರು. ಸಭೆಯಲ್ಲಿ ಸದಾಶಿವ ಆಯೋಗದ ವರದಿ ಜಾರಿಗೊಳಿಸುವ ಬಗ್ಗೆ ಸರ್ಕಾರದ ನಿಲುವು ಸ್ಪಷ್ಟಪಡಿಸಬೇಕು ಎಂದು ದಲಿತ ಮುಖಂಡರು ಪಟ್ಟು ಹಿಡಿದರು. ಇದರಿಂದ ಆಕ್ರೋಶಗೊಂಡ ಸಿದ್ದರಾಮಯ್ಯ, ಅದೆಲ್ಲ ಆಮೇಲೆ ಮೊದಲು ಬಜೆಟ್‌ಗೆ ಸಂಬಂಧಿಸಿದ ಚರ್ಚೆಯಾಗಲಿ ಎಂದಿದ್ದಾರೆ. ನೀವು ಹೀಗೆ ಹೇಳುವುದಾದರೆ ನಾವು ಸಭೆಯಿಂದ ಹೊರ ಹೋಗುತ್ತೇವೆ ಎಂದು ದಲಿತ ಮುಖಂಡರು ಸಭೆಯಿಂದ ಹೊರ ನಡೆದರು.
ಸಭೆ ಆರಂಭವಾಗುತ್ತಿದ್ದಂತೆ ಬಹುಜನ ಸಮಾಜ ಪಕ್ಷದ ರಾಜ್ಯ ಸಂಚಾಲಕ ಮಾರಸಂದ್ರ ಮುನಿಯಪ್ಪ ಮತ್ತು ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಎನ್ ಮೂರ್ತಿ ಅವರು ಸದಾಶಿವ ಆಯೋಗದ ವರದಿ ಜಾರಿ ಕುರಿತು ರಾಜ್ಯ ಸರ್ಕಾರ ತನ್ನ ನಿಲುವು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸದಾಶಿವ ಆಯೋಗದ ವರದಿಯನ್ವು ಜಾರಿಗೆ ತರಲು ಇಷ್ಟವಿಲ್ಲ. ಲಿಂಗಾಯತ, ವೀರಶೈವ ಜಾತಿಗಳನ್ನು ಒಡೆದಂತೆ ದಲಿತ ಜಾತಿಗಳನ್ನು ಒಡೆದು ಅವರು ಕಚ್ಛಾಡುವಂತೆ ಮಾಡುವ ಯತ್ನ ನಡೆಸಿದ್ದಾರೆ ಎಂದು ಮೂರ್ತಿ ಆರೋಪಿಸಿದರು. ಅಲ್ಲದೆ ಸಿಎಂ ಸಿದ್ದರಾಮಯ್ಯ ಅವರು ದಲಿತ ಸಹಯಾದಿಂದ ಅಧಿಕಾರಕ್ಕೆ ಬಂದು ಈಗ ಅವರ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸುವುದಾಗಿ ಮೂರ್ತಿ ಎಚ್ಚರಿಸಿದ್ದಾರೆ.