ಗದಗ್ : ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಜನಸಂಗ್ರಾಮ ಪರಿಷತ್ ಚಿಂತನೆ ನಡೆಸಿದ್ದು, ಈ ಕುರಿತು ಇದೇ ತಿಂಗಳ 7 ರಂದು ಧಾರವಾಡದಲ್ಲಿ ನಡೆಯುವ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಮಾಜ ಪರಿವರ್ತನಾ ಸಂಸ್ಥೆಯ ಮುಖ್ಯಸ್ಥ ಎಸ್. ಆರ್. ಹಿರೇಮಠ್ ಹೇಳಿದ್ದಾರೆ.
ಫೆ.24ರಿಂದ ಮಾರ್ಚ್ 2ರವರೆಗೆ ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ ಜಿಲ್ಲೆಗಳಲ್ಲಿ ಮತದಾರರ ಜಾಗೃತಿ ಜಾಥಾ ಹಾಗೂ ಸಮಾವೇಶ ನಡೆಯಲಿದೆ. ರೈತರ ಸಮಸ್ಯೆ, ಭ್ರಷ್ಟಾಚಾರ, ನಿರುದ್ಯೋಗ, ಆರೋಗ್ಯ ಮತ್ತು ಶಿಕ್ಷಣದ ಖಾಸಗೀಕರಣ ಈ ನಾಲ್ಕು ಸಮಸ್ಯೆಗಳ ಕುರಿತು ಜಾಥಾದಲ್ಲಿ ಗಮನ ಸೆಳೆಯಲಾಗುವುದು ಹಾಗೂ ಮೂರು ಪ್ರಮುಖ ರಾಜಕೀಯ ಪಕ್ಷಗಳನ್ನು ತಿರಸ್ಕರಿಸುವಂತೆ ಮತದಾರರಲ್ಲಿ ಮನವಿ ಮಾಡಲಾಗುವುದು ಎಂದರು.
‘ಫೆ.24ರಂದು ಕೂಡಲಸಂಗಮದಿಂದ ಜಾಥಾ ಪ್ರಾರಂಭಗೊಳ್ಳಲಿದ್ದು, ಫೆ. 25ರಂದು ನವಲಗುಂದದಲ್ಲಿ, ಫೆ.27ರಂದು ಗದುಗಿನಲ್ಲಿ ಸಮಾವೇಶ ನಡೆಯಲಿದೆ. ಗದುಗಿನ ಸಮಾವೇಶದಲ್ಲಿ ತೋಂಟದ ಶ್ರೀಗಳು ಸಾನ್ನಿಧ್ಯ ವಹಿಸುವರು. ನಿವೃತ್ತ ಲೋಕಾಯುಕ್ತ ಸಂತೋಷ ಹೆಗ್ಡೆ ಭಾಗವಹಿಸುವರು. ಫೆ. 28ರಂದು ಶಿಶುನಾಳದಲ್ಲಿ ಜಾಥಾ ನಡೆಯಲಿದ್ದು, ಮಾ.2ರಂದು ಹಾವೇರಿಯಲ್ಲಿ ಕೊನೆಗೊಳ್ಳಲಿದೆ’ ಎಂದರು.