ರಾಜ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆಗೆ ಕೆಲ ದಲಿತ ಸಂಘಟನೆಗಳ ಬಹಿಷ್ಕಾರ

Manjula VN
ಬೆಂಗಳೂರು: ಸದಾಶಿವ ಆಯೋಗದ ವರದಿ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಿರುವ ದಲಿತ ಸಂಘಟನೆಗಳು ಸಿದ್ದರಾಮಯ್ಯ ಅವರು ಕರೆದಿದ್ದ ಬಜೆಟ್ ಪೂರ್ವಭಾವಿ ಸಭೆ ಬಹಿಷ್ಕರಿಸಿ ಹೊರ ನಡೆದ ಘಟನೆ ನಡೆದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ದಲಿತ ಸಮುದಾಯದ ಎಡಗೈ, ಬಲಗೈ ಸೇರಿದಂತೆ ಎಲ್ಲಾ ಒಳಪಂಗಡಗಳ ಮುಖಂಡರನ್ನು ಬಜೆಟ್ ಪೂರ್ವಭಾವಿ ಸಭೆಗೆ ನಿನ್ನೆ ಆಹ್ವಾನ ನೀಡಿದ್ದರು. 
ಸಭೆ ಆರಂಭವಾಗುತ್ತಿದ್ದಂತೆಯೇ ಬಹುಜನ ಸಮಾಜ ಪಕ್ಷ ಮುಖಂಡ ಮಾರಸಂದ್ರ ಮುನಿಯಪ್ಪ, ಎನ್.ಮೂರ್ತಿ ಮತ್ತಿತರರು ಸದಾಶಿವ ವರದಿ ಜಾರಿ ವಿಚಾರದ ಬಗ್ಗೆ ತಮ್ಮ ಸ್ಪಷ್ಟ ನಿಲುವು ಪ್ರಕಟಿಸಬೇಕು. ಹಿಂದಿನ ಸಭೆಯಲ್ಲಿ 15 ದಿನಗಳ ಕಾಲಾವಕಾಶ ಕೊಡಿ. ವರದಿ ಜಾರಿ ಮಾಡುತ್ತೇನೆಂದು ಭರವಸೆ ನೀಡಿದ್ದಿರಿ. ಆದರೆ, 18 ದಿನಗಳಾದರೂ ಆ ಬಗ್ಗೆ ಚಕಾರ ಎತ್ತುತ್ತಿಲ್ಲ. ಎಷ್ಡು ದಿನಗಳಲ್ಲಿ ವರದಿ ಜಾರಿಗಾಗಿ ಕೇಂದ್ರಕ್ಕೆ ಶಿಫಾರಸು ಮಾಡುತ್ತೀರಿ ಎಂದು ತಿಳಿಸುವಂತೆ ಪಟ್ಟು ಹಿಡಿದರು. 
ಇದಕ್ಕೆ ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಯ್ಯ ಅವರು, ಆದಷ್ಟು ಬೇಗ ಕಾನೂನು ಸಲಹೆ ಪಡೆದು ವರದಿ ಶಿಫಾರಸಿಗೆ ಕ್ರಮ ವಹಿಸುವ ಭರವಸೆ ನೀಡಿದರು. ಇದಕ್ಕೆ ಸಮಾಧಾನಗೊಳ್ಳದ ಮುಖಂಡರು ಪಟ್ಟು ಮುಂದುವರೆಸಿದ್ದಕ್ಕೆ ಮುಖ್ಯಮಂತ್ರಿ ಅಸಮಾಧಾನ ವ್ಯಕ್ತಪಡಿಸಿದ್ದರಿಂದ ಸಭೆಯಿಂದ ಹೊರ ನಡೆದರು ಎಂದು ಹೇಳಲಾಗುತ್ತಿದೆ. 
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಕರ್ನಾಟಕ ದಲಿತ ಸಂಘಟನೆಯ ನಾಯಕ ಮಾವಳ್ಳಿ ಶಂಕರ್ ಅವರು, ಸಭೆ ಆರಂಭಗೊಳ್ಳುತ್ತಿದ್ದಂತೆಯೇ ಕೆಲ ನಾಯಕರು ಸದಾಶಿವ ಆಯೋಗದ ವರದಿ ಕುರಿತಂತೆ ಕೇಂದ್ರಕ್ಕೆ ಶಿಫಾರಸು ಕಳುಹಿಸುವಂತೆ ಪಟ್ಟು ಹಿಡಿದರು. ಈ ವೇಳೆ ಸಿದ್ದರಾಮಯ್ಯ ಅವರು ಈ ವಿಚಾರ ಕುರಿತಂತೆ ಆಂತರಿಕವಾಗಿ ಮಾತುಕತೆಗಳು ನಡೆಯುತ್ತಿದ್ದು, ಅಂತಿಮ ನಿರ್ಧಾರ ಕೈಗೊಳ್ಳುವುದಕ್ಕೂ ಮುನ್ನ ಪ್ರತೀಯೊಬ್ಬರ ಅಭಿಪ್ರಾಯಗಳನ್ನು ಪಡೆದುಕೊಳ್ಳುವ ಅಗತ್ಯವಿದೆ ಎಂದು ಹೇಳಿದರು. 
ಅಂತಿಮ ನಿರ್ಧಾರ ಕೈಗೊಳ್ಳುವುದಕ್ಕೂ ಮುನ್ನ ಅಡ್ವೊಕೇಟ್ ಜನರಲ್ ಅವರಿಂದ ವರದಿಯನ್ನು ಪಡೆದುಕೊಳ್ಳುವೆ. ನಂತರ ಅಂತಿನ ನಿರ್ಧಾರ ಕೈಗೊಳ್ಳುತ್ತೇನೆ. ಈ ಹಿಂದೆ ನಡೆದ ಸಭೆಯಲ್ಲೂ ಸುಧೀರ್ಘ ಚರ್ಚೆಯನ್ನು ನಡೆಸಲಾಗಿದೆ ಎಂದು ಸಿಎಂ ತಿಳಿಸಿದರು ಎಂದು ತಿಳಿಸಿದ್ದಾರೆ. 
SCROLL FOR NEXT